
ನವದೆಹಲಿ: ಮಾಜಿ ಕೇಂದ್ರ ಸಚಿವ ಶಶಿ ತರೂರ್ ಅವರ ಪತ್ನಿ ಸುನಂದಾ ಪುಷ್ಕರ್ ಅವರ ನಿಗೂಢ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಬಿಐ ನೀಡಿರುವ ವರದಿಯನ್ನು ಕೋರ್ಟ್‌ಗೆ ಸಲ್ಲಿಸುವ ಮುನ್ನ ವರದಿಯ ವಿವರ ನೀಡುವುದಿಲ್ಲ ಎಂದು ಗುರುವಾರ ದೆಹಲಿ ಪೊಲೀಸರು ತಿಳಿಸಿದ್ದಾರೆ.
ವರದಿ ಕೋರ್ಟ್‌ಗೆ ಸಲ್ಲಿಸುವ ಮುನ್ನ ಸಾರ್ವಜನಿಕವಾಗಿ ಬಹಿರಂಗಪಡಿಸಲು ಬರುವುದಿಲ್ಲ ಎಂದು ದೆಹಲಿ ಪೊಲೀಸ್ ಆಯುಕ್ತ ಬಿ.ಎಸ್. ಬಸ್ಸಿ ಅವರು ಹೇಳಿದ್ದಾರೆ.
ವರದಿ ಪರಿಶೀಲನೆಗೆ ಸಾಕಷ್ಟು ಸಮಯ ಬೇಕು ಮತ್ತು ಕೋರ್ಟ್‌ಗೆ ಸಲ್ಲಿಸಿದ ನಂತರವೂ ಕೆಲವು ಕಾನೂನು ಪ್ರಕ್ರಿಯೆಗಳು ಮುಗಿದ ನಂತರವೇ ವರದಿಯ ವಿವರ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ಸುನಂದಾ ಪುಷ್ಕರ್ ಅವರ ಸಾವಿನ ಸುತ್ತ ಹಲವು ಅನುಮಾನಗಳು ಮೂಡಿದ್ದವು. ಇದರಂತೆ ಈ ಹಿಂದೆ ಸುನಂದಾ ದೇಹದಲ್ಲಿ ರೇಡಿಯಾಕ್ಟಿವ್ ಎಂಬ ವಿಷಕಾರಿ ಅಂಶ ಪತ್ತೆಯಾಗಿದ್ದು, ಈ ವಿಷಕಾರಿ ಅಂಶವೇ ಸುನಂದಾ ಸಾವಿಗೆ ಕಾರಣ ಎಂದು ಹೇಳಲಾಗಿತ್ತು. ಆದರೆ, ಈ ವಿಷಕಾರಿ ಅಂಶಗಳನ್ನು ಅಧ್ಯಯನ ಮಾಡಲು ಭಾರತೀಯ ಪ್ರಯೋಗಾಲಯದಲ್ಲಿ ಸೌಲಭ್ಯಗಳಿಲ್ಲ ಎಂದು ಹೇಳಿದ್ದ ಅಧಿಕಾರಿಗಳು ಅಧ್ಯಯನ ನಡೆಸಲು ಮಾದರಿಯನ್ನು ಎಫ್ ಬಿಐ ಪ್ರಯೋಗಾಲಯಕ್ಕೆ ಕಳುಹಿಸಿದ್ದರು.
ಇದೀಗ ಎಫ್ ಬಿಐ ಪ್ರಯೋಗಾಲಯದ ಅಧಿಕಾರಿಗಳು ಸುನಂದಾ ಸಾವಿನ ಕುರಿತ ವರದಿಯನ್ನು ಸಲ್ಲಿಸಿದ್ದು, ವರದಿಯಲ್ಲಿ ಸುನಂದಾ ಸಾವಿಗೆ ವಿಕಿರಣಗಳ ವಿಷ ಕಾರಣವಲ್ಲ. ದೇಹದಲ್ಲಿ ಪತ್ತೆಯಾದ ವಿಷವು ಸಾವನ್ನುಂಟು ಮಾಡುವಷ್ಟು ವಿಷಕಾರಿಯಾಗಿಲ್ಲ ಎಂದು ಹೇಳಿದ್ದಾರೆ.
2014ರ ಜನವರಿ 17 ರಂದು ದೆಹಲಿಯ ಪಂಚತಾರಾ ಹೋಟೆಲ್ ನಲ್ಲಿ ಸುನಂದಾ ಪುಷ್ಕರ್ ಅವರ ಮೃತ ದೇಹ ಪತ್ತೆಯಾಗಿತ್ತು. ಈ ಸಾವು ಸಾಕಷ್ಟು ಅನುಮಾನಕ್ಕೆ ದಾರಿ ಮಾಡಿಕೊಟ್ಟಿತ್ತು.
Advertisement