ಜಮ್ಮು ಕಾಶ್ಮೀರ: ಪುತ್ರಿಗೆ ಅಧಿಕಾರ ಹಸ್ತಾಂತರ ಮಾಡಲಿದ್ದಾರೆಯೇ ಮುಖ್ಯಮಂತ್ರಿ ಮುಫ್ತಿ?

ಜಮ್ಮು ಕಾಶ್ಮೀರ ಸರ್ಕಾರದಲ್ಲಿ ಆಗಲಿರುವ ಬದಲಾವಣೆಯ ಬಗ್ಗೆ ಊಹಾಪೋಹಗಳು ದಟ್ಟವಾಗಿದ್ದು ಮುಖ್ಯಮಂತ್ರಿ ಮುಫ್ತಿ ಮೊಹಮ್ಮದ್ ಸಯ್ಯದ್ ಅವರು
ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಮುಫ್ತಿ ಮೊಹಮ್ಮದ್ ಸಯ್ಯದ್ ಮತ್ತು ಪುತ್ರಿ ಮೆಹಬೂಬಾ ಮುಫ್ತಿ
ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಮುಫ್ತಿ ಮೊಹಮ್ಮದ್ ಸಯ್ಯದ್ ಮತ್ತು ಪುತ್ರಿ ಮೆಹಬೂಬಾ ಮುಫ್ತಿ

ಶ್ರೀನಗರ: ಜಮ್ಮು ಕಾಶ್ಮೀರ ಸರ್ಕಾರದಲ್ಲಿ ಆಗಲಿರುವ ಬದಲಾವಣೆಯ ಬಗ್ಗೆ ಊಹಾಪೋಹಗಳು ದಟ್ಟವಾಗಿದ್ದು ಮುಖ್ಯಮಂತ್ರಿ ಮುಫ್ತಿ ಮೊಹಮ್ಮದ್ ಸಯ್ಯದ್ ಅವರು ತಮ್ಮ ೫೬ ವರ್ಷದ ಪುತ್ರಿ ಮೆಹಬೂಬಾ ಮುಫ್ತಿ ಅವರಿಗೆ ಅಧಿಕಾರ ಹಸ್ತಾಂತರ ಮಾಡುವ ಸುಳಿವನ್ನು ಶುಕ್ರವಾರ ನೀಡಿದ್ದಾರೆ.

"ಜವಾಬ್ದಾರಿಗಳನ್ನು ಹೊರಲು ಮೆಹಬೂಬಾ ಬೆಳೆದಿದ್ದಾರೆ" ಎಂದು ಶುಕ್ರವಾರ ಜಮ್ಮುವಿನ ಪತ್ರಿಕಾ ಗೋಷ್ಠಿಯಲ್ಲಿ ಮುಫ್ತಿ ತಿಳಿಸಿದ್ದಾರೆ. ಮುಂದಿನ ವರ್ಷ ಜನವರಿ ೧೨ಕ್ಕೆ ೮೦ಕ್ಕೆ ಕಾಲಿಡಲಿರುವ ಮುಫ್ತಿ ಅನಾರೋಗ್ಯದ ಕಾರಣಗಳಿಂದಾಗಿ ಮುಖ್ಯಮಂತ್ರಿ ಅಧಿಕಾರವನ್ನು ಪುತ್ರಿಗೆ ವಹಿಸಿಕೊಡುವ ಸಾಧ್ಯತೆ ಇದೆ ಎಂಬ ವದಂತಿ ದಟ್ಟವಾಗಿದೆ.

ಉಪಮುಖ್ಯಮಂತ್ರಿ ನಿರ್ಮಲ್ ಸಿಂಗ್ ಮತ್ತು ಹಣಕಾಸು ಸಚಿವ ಹಸೀಬ್ ದ್ರಾಬು ಜೊತೆಗಿದ್ದ ಮುಫ್ತಿ ಪಿಡಿಪಿ ಅಧ್ಯಕ್ಷೆ ಮತ್ತು ಸಂಸದೆಯಾಗಿರುವ ಮೆಹಬೂಬಾ ಜನರ ತೊಂದರೆಗಳಿಗೆ ಹೆಚ್ಚು ಅರ್ಥಪೂರ್ಣವಾಗಿ ಸ್ಪಂದಿಸಲಿದ್ದಾರೆ ಎಂದು ತಿಳಿಸಿದ್ದಾರೆ.

"ಮೆಹಬೂಬಾ ಅವರ ಪರಿಶ್ರಮದಿಂದಲೇ ೮೭ ಸದ್ಯರ ವಿಧಾನಸಭೆಯಲ್ಲಿ ಪಿಡಿಪಿ ೨೮ ಸ್ಥಾನಗಳನ್ನು ಅಲಂಕರಿಸಲು ಸಾಧ್ಯವಾದದ್ದು" ಎಂದು ಅವರು ತಿಳಿಸಿದ್ದಾರೆ.

"ನಾನು ಮಾರ್ಚ್ ನಲ್ಲಿ ಅಧಿಕಾರ ಸ್ವೀಕರಿಸಿದ ನಂತರ ಅಭಿವೃದ್ಧಿ ಮತ್ತು ಆಡಳಿತ ಕಡೆಗಷ್ಟೇ ಗಮನ ಹರಿಸಲು ಸಾಧ್ಯವಾಯಿತು, ಪಕ್ಷದ ಕಾರ್ಯಕರ್ತರ ಜೊತೆ ಒಡನಾಟ ಸಾಧ್ಯವಾಗಲಿಲ್ಲ. ಆದರೆ ಮೆಹಬೂಬಾ ಅವರ ಜೊತೆ ನಿಕಟ ಸಂಪರ್ಕ ಹೊಂದಿದ್ದಾರೆ ಮತ್ತು ಅವರ ತೊಂದರೆಗಳಿಗೆ ಸ್ಪಂದಿಸುತ್ತಿದ್ದಾರೆ" ಎಂದು ಮುಫ್ತಿ ತಿಳಿಸಿದ್ದಾರೆ.

ಈ ನಿಟ್ಟಿನಲ್ಲಿ ಮೈತ್ರಿ ಪಕ್ಷ ಬಿಜೆಪಿ ಜೊತೆಗೂ ಮಾತುಕತೆ ನಡೆಸಲಿದ್ದೇನೆ ಎಂದು ಸುಳಿವು ನೀಡಿರುವ ಮುಫ್ತಿ ಇದು ಸಾಮೂಹಿಕ ನಿರ್ಧಾರವಾಗಿರುತ್ತದೆ ಎಂದಿದ್ದಾರೆ.

ಒಮ್ಮೆ ಮೆಹಬೂಬಾ ಏನಾದರು ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದರೆ ಜಮ್ಮು ಕಾಶ್ಮೀರ ರಾಜ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ ಮಹಿಳೆಯೊಬ್ಬರು ರಾಜ್ಯದ ಆಡಳಿತದ ಚುಕ್ಕಾಣಿ ಹಿಡಿಯಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com