ಆಮಿಷದಿಂದ ಅಸಹಿಷ್ಣುತೆ ವಿವಾದ ಸೃಷ್ಟಿ: ವಿ.ಕೆ. ಸಿಂಗ್

ಭಾರತದಲ್ಲಿ ಅಸಹಿಷ್ಣುತೆ ವಿಷಯವನ್ನು ಹಣ ಕೊಟ್ಟು ದುರುದ್ದೇಶಪೂರ್ವಕವಾಗಿ ಹುಟ್ಟುಹಾಕಲಾಗಿದೆ ಎಂದು ಕೇಂದ್ರ ವಿದೇಶಾಂಗ...
ಕೇಂದ್ರ ಸಚಿವ ಜನರಲ್ ವಿ.ಕೆ.ಸಿಂಗ್
ಕೇಂದ್ರ ಸಚಿವ ಜನರಲ್ ವಿ.ಕೆ.ಸಿಂಗ್

ಲಾಸ್ ಏಂಜೆಲೀಸ್: ಭಾರತದಲ್ಲಿ ಅಸಹಿಷ್ಣುತೆ ವಿಷಯವನ್ನು ಹಣ ಕೊಟ್ಟು  ದುರುದ್ದೇಶಪೂರ್ವಕವಾಗಿ ಹುಟ್ಟುಹಾಕಲಾಗಿದೆ ಎಂದು ಕೇಂದ್ರ ವಿದೇಶಾಂಗ ರಾಜ್ಯ ಸಚಿವ ವಿ.ಕೆ.ಸಿಂಗ್ ಹೇಳಿದ್ದಾರೆ.

ಯಾರಿಗೋ ಬೇಕಾದಷ್ಟು ಹಣ ಕೊಟ್ಟು ಅಸಹಿಷ್ಣುತೆ ವಿಷಯವನ್ನು ಬೇಕೆಂತಲೇ ಎಬ್ಬಿಸಲಾಗಿದೆ. ಬಿಹಾರ ಚುನಾವಣೆ ಮೇಲೆ ಪ್ರಭಾವ ಬೀರಲು ರಾಜಕೀಯ ಉದ್ದೇಶಕ್ಕಾಗಿ ಈ ರೀತಿ ಮಾಡಲಾಗಿದೆ ಎಂದು ಅವರು ಹೇಳಿಕೆ ನೀಡಿದ್ದಾರೆ.

ಅಸಹಿಷ್ಣುತೆ ಬಗ್ಗೆ ನಡೆಯುತ್ತಿರುವ ಚರ್ಚೆ ಅದು ಚರ್ಚೆಯೇ ಅಲ್ಲ. ಯೋಜನಾಪೂರ್ವಕವಾಗಿ ಅನಗತ್ಯ ವಿವಾದಗಳನ್ನು ಹುಟ್ಟುಹಾಕಲಾಗಿದೆ ಎಂದು ಅವರು ಲಾಸ್ ಏಂಜೆಲೀಸ್ ನಲ್ಲಿ ಸ್ಥಳೀಯ ಪ್ರವಾಸಿ ಭಾರತೀಯ ದಿವಸ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.

ಭಾರತದಲ್ಲಿ ಮಾಧ್ಯಮಗಳು ಹೇಗೆ ಕೆಲಸ ಮಾಡುತ್ತಿವೆ ಎಂಬುದರ ಬಗ್ಗೆ ನಾನು ಮಾತನಾಡಲು ಇಚ್ಛಿಸುವುದಿಲ್ಲ. ಅಸಹಿಷ್ಣುತೆ ಬಗ್ಗೆ ತೋಚಿದಂತೆ ಮಾತನಾಡುತ್ತಾರೆ. ಇದರ ಅರ್ಥವೇನು? ಕಳೆದ ಸಲ ದೆಹಲಿ ವಿಧಾನಸಭಾ ಚುನಾವಣೆ ನಡೆದಾಗ, ಕ್ರಿಸ್ತಿಯನ್ ಸಮುದಾಯದ ಬಗ್ಗೆ ಅವರನ್ನು ಕೆರಳಿಸುವ ರೀತಿಯಲ್ಲಿ ಲೇಖನಗಳನ್ನು ಬರೆಯಲಾಯಿತು.ಚರ್ಚ್ ನಲ್ಲಿ ನಡೆದ ಸಣ್ಣ ಕಳ್ಳತನ ಪ್ರಕರಣವನ್ನು ಚರ್ಚ್ ಮೇಲೆ ಸತತ ದಾಳಿ ನಡೆಯುತ್ತಿದೆ ಎನ್ನುವಂತೆ ಮಾಧ್ಯಮಗಳಲ್ಲಿ ಬಿಂಬಿಸಲಾಯಿತು.ಅಂದರೆ ಸಮುದಾಯಗಳನ್ನು ಕೆರಳಿಸಿ, ಭಾರತದಲ್ಲಿ ಧಾರ್ಮಿಕ ಅಸಹಿಷ್ಣುತೆಯನ್ನು ಬೇಕೆಂದೇ ಹುಟ್ಟುಹಾಕಿ ಚುನಾವಣೆಗಳಲ್ಲಿ ಮತ ಪಡೆಯುವ ತಂತ್ರವಿದು. ಇಲ್ಲಿ ಮಾಧ್ಯಮಗಳು ಚೆಂಡಾಟ ಆಡುತ್ತಿವೆ. ಮಾಧ್ಯಮಗಳಿಗೆ ಹಣ ನೀಡಲಾಗುತ್ತದೆಯೋ ಇಲ್ಲವೋ ನನಗೆ ಗೊತ್ತಿಲ್ಲ. ನಾನಿಲ್ಲ ಕೇವಲ ವಾಸ್ತವವನ್ನು ನಿಮ್ಮ ಮುಂದಿಡುತ್ತಿದ್ದೇನೆ. ಚುನಾವಣೆ ಮುಗಿದ ಮೇಲೆ ವಾದ-ವಿವಾದಗಳೆಲ್ಲ ಮುಗಿದುಹೋಗುತ್ತವೆ ಎಂದು ಮಾಧ್ಯಮದವರ ಮುಂದೆ ಹೇಳಿದರು.

ದೆಹಲಿ ವಿಧಾನಸಭೆ ಚುನಾವಣೆ ಸಮಯದಲ್ಲಿ ನಡೆದ ಘಟನೆಯೇ ಬಿಹಾರ ಚುನಾವಣೆ ಸಂದರ್ಭದಲ್ಲೂ ನಡೆಯಿತು. ಧಾರ್ಮಿಕ ಅಸಹಿಷ್ಣುತೆ ವಿವಾದವನ್ನು ಹುಟ್ಟುಹಾಕಲಾಯಿತು. ಚುನಾವಣೆ ಪ್ರಕ್ರಿಯೆ ಮುಗಿದ ಮೇಲೆ ವಿವಾದ ತಣ್ಣಗಾಯಿತು. ಈಗ ಧಾರ್ಮಿಕ ಅಸಹಿಷ್ಣುತೆ ಬಗ್ಗೆ ಮಾತನಾಡುವವರು ಅಂದು ಹಿರಿಯ ಗಾಂಧೀವಾದಿ ಅಣ್ಣಾ ಹಜಾರೆಯವರು ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿದ್ದಾಗ ರಾತ್ರೋರಾತ್ರಿ ಬಂಧಿಸಿ ತಿಹಾರ್ ಜೈಲಿಗೆ ಕಳುಹಿಸಿದರು, ಆಗ ಯಾವ ಸರ್ಕಾರ ಇತ್ತು? ಇವರಿಗೆಲ್ಲ ಮಾತನಾಡುವ, ಪ್ರತಿಭಟನೆ ನಡೆಸುವ ನೈತಿಕ ಹಕ್ಕು ಇದೆಯೇ, ಜನರು ಇಂಥ ಸನ್ನಿವೇಶಗಳಲ್ಲಿ ಗೊಂದಲಗಳಲ್ಲಿ ಸಿಕ್ಕಿ ಹಾಕಿಕೊಳ್ಳುವುದು ಬೇಡ. ಭಾರತೀಯ ಮಾಧ್ಯಮಗಳು ಇನ್ನಾದರೂ ಪಾಠ ಕಲಿಯಬೇಕು ಎಂದರು.

ಭಾರತದಲ್ಲಿ ಈಗ ಪರಿಸ್ಥಿತಿ ಬದಲಾಗಿದೆ. ಕೇಂದ್ರದಲ್ಲಿ ಎನ್ ಡಿಎ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಜನರಿಗೆ ಸರ್ಕಾರದ ಮೇಲೆ ನಂಬಿಕೆ ಹೆಚ್ಚಾಗಿದೆ. ಒಳಗೊಳ್ಳುವಿಕೆ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಗುರುತಾಗಿದೆ. ಹೆಚ್ಚಿನ ಹೂಡಿಕೆದಾರರನ್ನು ಆಕರ್ಷಿಸುತ್ತಿದೆ ಎಂದು ಸಿಂಗ್ ನುಡಿದರು.

ಧಾರ್ಮಿಕ ಅಸಹಿಷ್ಣುತೆ ವಿವಾದಕ್ಕೆ ಸಂಬಂಧಿಸಿ ಇದುವರೆಗೆ ಸುಮಾರು 75 ಮಂದಿ ಬರಹಗಾರರು, ಇತಿಹಾಸ ತಜ್ಞರು, ಸಿನಿಮಾ ಕಲಾವಿದರು, ವಿಜ್ಞಾನಿಗಳು ತಮ್ಮ ಪ್ರಶಸ್ತಿಗಳನ್ನು ಹಿಂತಿರುಗಿಸಿದ್ದಾರೆ. ಆದರೆ ಈ ಪ್ರತಿಭಟನೆಯನ್ನು ಬಿಜೆಪಿ ಸರ್ಕಾರ ರಾಜಕೀಯ ಪ್ರೇರಿತ ದಂಗೆ ಎಂದು ಹೇಳುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com