ಕೋಲ್ ಇಂಡಿಯಾದ ಶೇ.10 ರಷ್ಟು ಷೇರು ಮಾರಾಟಕ್ಕೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ

ಕೋಲ್ ಇಂಡಿಯಾದಿಂದ ಶೇ.10 ರಷ್ಟು ಪಾಲನ್ನು ಹಿಂಪಡೆಯಲು ಕೇಂದ್ರ ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ.
ಕೋಲ್ ಇಂಡಿಯಾ(ಸಂಗ್ರಹ ಚಿತ್ರ)
ಕೋಲ್ ಇಂಡಿಯಾ(ಸಂಗ್ರಹ ಚಿತ್ರ)

ನವದೆಹಲಿ: ಕೋಲ್ ಇಂಡಿಯಾದಿಂದ ಶೇ.10 ರಷ್ಟು ಪಾಲನ್ನು ಹಿಂಪಡೆಯಲು ಕೇಂದ್ರ ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ.
ಸಚಿವ ಸಂಪುಟದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕಲ್ಲಿದ್ದಲು ಸಚಿವ ಪಿಯೂಷ್ ಗೋಯೆಲ್, ಕೋಲ್ ಇಂಡಿಯಾದಿಂದ ಶೇ.10 ರಷ್ಟು ಬಂಡವಾಳ ಹಿಂತೆಗೆಯುವುದಕ್ಕೆ ಕೈಗೊಂಡ ನಿರ್ಧಾರ ಸಚಿವ ಸಂಪುಟದ ಪ್ರಮುಖ ನಿರ್ಧಾರಗಳಲ್ಲಿ ಒಂದಾಗಿದೆ ಎಂದು ತಿಳಿಸಿದ್ದಾರೆ. ಬಂಡವಾಳ ಹಿಂಪಡೆಯುವುದಕ್ಕೆ ನಿಯಮಗಳು ಮತ್ತು ಸಮಯವನ್ನು ಹಣಕಾಸು ಸಚಿವಾಲಯ ಹಾಗೂ ಬಂಡವಾಳ ಹಿಂತೆಗೆತ ಇಲಾಖೆ ತೀರ್ಮಾನಿಸಲಿದೆ. ಶೇ.10 ರಷ್ಟು ಷೇರುಗಳನ್ನು ಮಾರಾಟ ಮಾಡುವ ಮೂಲಕ  23 ,000 ಕೋಟಿಯಿಂದ 24 ,000 ಕೋಟಿ ವರೆಗೂ ವಾಪಸ್ ಪಡೆಯುವ ಸಾಧ್ಯತೆ ಇದೆ.
ಕೋಲ್ ಇಂಡಿಯಾದಲ್ಲಿ ಸರ್ಕಾರ ಶೇ.78 .65 ರಷ್ಟು ಶೇರುಗಳನ್ನು ಹೊಂದಿದ್ದು, ಸ್ಟಾಕ್ ಷೇರು ವಿನಿಮಯ ಪದ್ಧತಿ ಮೂಲಕ ಭಾರತ ಸರ್ಕಾರ ಶೇ.10 ರಷ್ಟು ಷೇರುಗಳನ್ನು ಮಾರಾಟ ಮಾಡಲಿದೆ ಎಂದು ಬಂಡವಾಳ ಹಿಂತೆಗೆತ ಇಲಾಖೆ ತಿಳಿಸಿದೆ. ಹರಾಜು ಪ್ರಕ್ರಿಯೆ ಮೂಲಕ ಷೇರು ಮಾರಾಟಕ್ಕಾಗಿ ಕೇಂದ್ರ ಸರ್ಕಾರ ಇತ್ತೀಚೆಗೆ ವ್ಯಾಪಾರಿ ಬ್ಯಾಂಕುಗಳನ್ನು ಆಹ್ವಾನಿಸಿತ್ತು. 
ಕೋಲ್ ಇಂಡಿಯಾದಲ್ಲಿರುವ ಆಸಕ್ತ ನೌಕರರಿಗೆ ರಿಯಾಯಿತಿ ದರದಲ್ಲಿ ಷೇರುಗಳನ್ನು ಹಂಚಿಕೆ ಮಾಡುವ ಆಯ್ಕೆಯನ್ನು ಕೇಂದ್ರ ಸರ್ಕಾರ ಪರಿಗಣಿಸಿದೆ. ಇದಕ್ಕೂ ಮುನ್ನ ಜನವರಿ ಅಂತ್ಯದಲ್ಲಿ ಕೇಂದ್ರ ಸರ್ಕಾರ ಶೇ.10 ರಷ್ಟು ಶೇರುಗಳನ್ನು ಮಾರಾಟಮಾಡಿ, 22 ,557 ಕೋಟಿ ರೂಪಾಯಿಯನ್ನು ಗಳಿಸಿತ್ತು. ಕೇಂದ್ರ ಸರ್ಕಾರದ ಬಂಡವಾಳ ಹಿಂತೆಗೆತ ಕ್ರಮವನ್ನು ವಿರೋಧಿಸಿ ಸೆಪ್ಟೆಂಬರ್ ನಲ್ಲಿ ಕೋಲ್ ಇಂಡಿಯಾ ನೌಕರರು ಪ್ರತಿಭಟನೆ ನಡೆಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com