
ನವದೆಹಲಿ: ಕೇಂದ್ರ ಕ್ರೀಡಾ ಮತ್ತು ಯುವಜನ ಖಾತೆ ಸಚಿವ ಸರ್ಬಾನಂದ್ ಸೋನೊವಾಲ್ ಅವರನ್ನು ಅಸ್ಸಾಂ ಬಿಜೆಪಿ ಅಧ್ಯಕ್ಷರನ್ನಾಗಿ ಹಾಗೂ ಮುಂಬರುವ ವಿಧಾನಸಭೆ ಚುನಾವಣಾ ಸಮಿತಿ ಮುಖ್ಯಸ್ಥರನ್ನಾಗಿಯೂ ನೇಮಕ ಮಾಡಲಾಗಿದೆ. ಈ ಮೂಲಕ ಅಸ್ಸಾಂ ವಿಧಾನಸಭೆ ಚುನಾವಣೆಯಲ್ಲಿ ಸೋನೊವಾಲ್ ಅವರೇ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿಯಾಗುವ ಸೂಚನೆ ನೀಡಲಾಗಿದೆ.
ಸೋನೊವಾಲ್ ಅವರ ನೇಮಕವನ್ನು ಪ್ರಕಟಿಸಿದ ಕೇಂದ್ರ ಸಚಿವ ಪ್ರಕಾಶ್ ಜಾವೇಡ್ಕರ್ ಅವರು, ಇತ್ತೀಚಿಗಷ್ಟೇ ಕೆಲವು ಕಾಂಗ್ರೆಸ್ ಶಾಸಕರೊಂದಿಗೆ ಬಿಜೆಪಿ ಸೇರಿದ ಅಸ್ಸಾಂ ಕಾಂಗ್ರೆಸ್‌ನ ಪ್ರಭಾವಿ ನಾಯಕ ಹಿಮಂತ್ ಬಿಸ್ವಾ ಶರ್ಮಾ ಅವರು ಚುನಾವಣಾ ಸಮಿತಿಯ ಸಂಚಾಲಕರಾಗಿ ನೇಮಕಗೊಂಡಿದ್ದಾರೆ ಎಂದರು.
ಬಿಹಾರ ಚುನಾವಣೆಯಿಂದ ಪಾಠ ಕಲಿತಿರುವ ಬಿಜೆಪಿ, ಅಸ್ಸಾಂನಲ್ಲಿ ಸ್ಥಳೀಯ ನಾಯಕರಿಗೆ ಮಣೆ ಹಾಕಲು ನಿರ್ಧರಿಸಿದೆ. ಬಿಹಾರ ಚುನಾವಣೆ ವೇಳೆ ಯಾವುದೇ ರಾಜ್ಯ ಸಮಿತಿ ರಚಿಸಿರಲಿಲ್ಲ ಮತ್ತು ಸ್ಥಳೀಯ ನಾಯಕರಿಗೆ ಆದ್ಯತೆ ನೀಡದೇ ಹೊರಗಿನವರಿಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗಿತ್ತು.
ಸೋನೊವಾಲ್ ಅವರನ್ನು ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಮಾಡುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಜಾವೇಡ್ಕರ್, ಈ ಬಗ್ಗೆ ಸೂಕ್ತ ಸಮಯದಲ್ಲಿ ಪಕ್ಷದ ಸಂಸದೀಯ ಮಂಡಳಿ ಸಭೆ ನಿರ್ಧಾರ ತೆಗೆದುಕೊಳ್ಳಲಿದೆ ಎಂದರು.
Advertisement