

ರಾಜ್ಕೋಟ್: ನೌಕರಿಗಳಲ್ಲಿ ಮತ್ತು ಶಿಕ್ಷಣಸಂಸ್ಥೆಗಳಲ್ಲಿ ಪಟೇಲ್ ಸಮುದಾಯಕ್ಕೆ ಯಾವುದೇ ಮೀಸಲಾತಿ ಸೃಷ್ಟಿಸುವುದಿಲ್ಲ ಎಂದು ಗುಜರಾತ್ ಮುಖ್ಯಮಂತ್ರಿ ಆನಂದಿಬೇನ್ ಪಟೇಲ್ ಸೋಮವಾರ ಘೋಷಿಸಿದ್ದಾರೆ.
ಆರು ಪುರಸಭೆಗಳಲ್ಲಿನ ಚುನಾವಣೆಗಳ ಮೊದಲ ಹಂತದ ಚುನಾವಣೆಯ ನಂತರ ಮುಖ್ಯಮಂತ್ರಿ ಈ ಘೋಷಣೆ ಮಾಡಿದ್ದಾರೆ.
ಅಮ್ರೇಲಿ ಜಿಲ್ಲೆಯ ಸೌರಾಷ್ಟ್ರದಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು. ಪಟೇಲ್ ಸಮುದಾಯ ನಾಯಕರು ಹಾರ್ದಿಕ್ ಪಟೇಲ್ ನಾಯಕತ್ವದಲ್ಲಿ ನಾಲ್ಕು ತಿಂಗಳುಗಳಿಂದ ಮೀಸಲಾತಿಗಾಗಿ ಪ್ರತಿಭಟನೆ ನಡೆಸುತ್ತಿದ್ದರೆ, ಹಾರ್ದಿಕ್ ಪಟೇಲ್ ಅವರ ವಿರುದ್ಧ ದೇಶದ್ರೋಹದ ಆರೋಪ ಮಾಡಿ ಗುಜರಾತ್ ಸರ್ಕಾರ ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದೆ.
ಇದೇ ಮೊದಲ ಬಾರಿಗೆ ಮುಖ್ಯಮಂತ್ರಿ ನಿರ್ಧಿಷ್ಟವಾಗಿ ಪಟೇಲ್ ಸಮುದಾಯಕ್ಕೆ ಮೀಸಲಾತಿ ನಿರಾಕರಿಸಿರುವುದು. "ಕೆಲವ ೫% ಪಟೇಲ್ ಸಮುದಾಯದವರು ಮೀಸಲಾತಿಗಾಗಿ ಆಗ್ರಹಿಸಿದ್ದಾರೆ. ಅವರಿಗೆ ಮೀಸಲಾತಿ ನೀಡುವ ಪ್ರಶ್ನೆಯೇ ಇಲ್ಲ. ಉಳಿದ ಸಮುದಾಯಗಳು ನರಳಲು ನಾವು ಅವಕಾಶ ನೀಡುವುದಿಲ್ಲ" ಎಂದು ಆನಂದಿಬೇನ್ ತಿಳಿಸಿದ್ದಾರೆ.
Advertisement