
ನವದೆಹಲಿ: ಬಾಲಿವುಡ್ ನಟ ಆಮಿರ್ ಖಾನ್ ಅವರ ಅಸಹಿಷ್ಣುತೆ ಹೇಳಿಕೆ ವಿವಾದ ಮತ್ತಷ್ಟು ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಸಹಿಷ್ಣುತೆ ಭಾರತೀಯರ ಡಿಎನ್‌ಎದಲ್ಲೇ ಇದೆ ಎಂದು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಅವರು ಬುಧವಾರ ಹೇಳಿದ್ದಾರೆ.
'ಸಹಿಷ್ಣುತೆ ಭಾರತೀಯರ ಡಿಎನ್‌ಎದಲ್ಲೇ ಇದೆ. ಅಸಹಿಷ್ಣುತೆಗೆ ದೇಶದಲ್ಲಿ ಜಾಗ ಇಲ್ಲ. ಜನ ರಾಜಕೀಯ ಪ್ರೇರಿತ ಪ್ರಭಾವಕ್ಕೆ ಒಳಗಾಗಬಾರದು' ಎಂದು ನಖ್ವಿ ಹೇಳಿದ್ದಾರೆ.
'ದೇಶದಲ್ಲಿ ಶಾಂತಿ ಮತ್ತು ಸಾಮರಸ್ಯ ಬಯಸುವುದು ತಪ್ಪಲ್ಲ. ಇದಕ್ಕಾಗಿ ಆಮಿರ್ ಖಾನ್ ಅವರು ದೇಶ ಬಿಡುವ ಅಗತ್ಯವೂ ಇಲ್ಲ. ಅವರು ತಮ್ಮ ಹೇಳಿಕೆಯನ್ನು ವಾಪಸ್ ಪಡೆಯಬೇಕು ಮತ್ತು ಯಾವುದೇ ರಾಜಕೀಯ ಪ್ರಭಾವಕ್ಕೆ ಒಳಗಾಗಬಾರದು' ಎಂದಿದ್ದಾರೆ.
ದೇಶದಲ್ಲಿ ಅಸಹಿಷ್ಣುತೆ ವಿರುದ್ಧದ ಸಾಂಸ್ಕೃತಿಕ ವಲಯದ ಜನಾಗ್ರಹಕ್ಕೆ ದನಿಗೂಡಿಸಿದ್ದ ಆಮೀರ್ ಖಾನ್, ಈ ವಾತಾವರಣದಿಂದ ಭೀತಗೊಂಡು ದೇಶ ತೊರೆದು ಹೋಗೋಣ ಎಂದು ಪತ್ನಿ ಸಲಹೆ ನೀಡಿರುವುದಾಗಿ ಹೇಳಿದ್ದರು. ಇದು ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿತ್ತು.
Advertisement