
ನವದೆಹಲಿ: ಹವಾಮಾನ ಶೃಂಗಸಭೆಯಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಪ್ಯಾರಿಸ್ ಗೆ ತೆರಳಿದ್ದಾರೆ. ನ.30 ರಂದು ಪ್ರಾರಂಭವಾಗಲಿರುವ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹವಾಮಾನ ಬದಲಾವಣೆ ಬಗ್ಗೆ ಭಾರತದ ದೃಷ್ಟಿಕೋನವನ್ನು ಜಾಗತಿಕ ನಾಯಕರೆದುರು ಮಂಡಿಸಲಿದ್ದಾರೆ. ಸೌರಶಕ್ತಿಯನ್ನು ಸಮರ್ಥವಾಗಿ ಬಳಕೆ ಮಾಡುವುದರ ಬಗ್ಗೆ ಹವಾಮಾನ ಶೃಂಗಸಭೆಯಲ್ಲಿ ಚರ್ಚೆ ನಡೆಯಲಿದ್ದು 122 ರಾಷ್ಟ್ರಗಳು ಭಾಗವಹಿಸಲಿವೆ. 50 ಸಾವಿರಕ್ಕೂ ಹೆಚ್ಚು ಜನರು ಈ ಶೃಂಗಸಭೆಯಲ್ಲಿ ಭಾಗವಹಿಸುತ್ತಿದ್ದು, 25 ಸಾವಿರ ಪ್ರತಿನಿಧಿಗಳು ಜಾಗತಿಕ ತಾಪಮಾನದಿಂದ ಪರಿಸರವನ್ನು ರಕ್ಷಿಸಲು ಒಪ್ಪಂದ ಮಾಡಿಕೊಳ್ಳುವ ನಿರೀಕ್ಷೆ ಇದೆ.
ಅಭಿವೃದ್ಧಿಶೀಲ ರಾಷ್ಟ್ರಗಳು ಚರ್ಚೆ ನಡೆಸಬೇಕಿದ್ದು, ಅಮೆರಿಕ, ಜರ್ಮನಿ, ಫ್ರೆಂಚ್ ರಾಷ್ಟ್ರಗಳಿಂದ ಗಳಿಂದ ಕೆಲವು ಹೊಂದಾಣಿಕೆಯ ಭರವಸೆ ನಿರೀಕ್ಷಿಸಲಾಗುತ್ತಿದೆ ಎಂದು ಪರಿಸರ ಖಾತೆ ಸಚಿವ ಪ್ರಕಾಶ್ ಜಾವ್ಡೇಕರ್ ತಿಳಿಸಿದ್ದಾರೆ.
ಜಾಗತಿಕ ತಾಪಮಾನ ಏರಿಕೆಯನ್ನು 2 ಡಿಗ್ರಿ ಸೆಲ್ಸಿಯಸ್ ಗಿಂತ ಕಡಿಮೆ ಇರಿಸಿಕೊಳ್ಳುವ ಬಗ್ಗೆ, ವಾತಾವರಣ ನಿಧಿಗಾಗಿ ವಾರ್ಷಿಕ $ 100 ಬಿಲಿಯನ್ ಸಂಗ್ರಹಿಸುವುದು ಹಾಗೂ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ತಂತ್ರಜ್ಞಾನ ವರ್ಗಾವಣೆ ಮಾಡುವ ವಿಚಾರ ಒಪ್ಪಂದಗಳ ಮುಖ್ಯ ಮಾನದಂಡಗಲಾಗಿರುತ್ತವೆ ಎಂದು ಜಾವ್ಡೇಕರ್ ತಿಳಿಸಿದ್ದಾರೆ.
Advertisement