ಜೈಲಿನಲ್ಲೂ ಅಬು ಸಲೇಂ ರಾಜನಂತೆ ಮೆರೆಯುತ್ತಿದ್ದಾನೆ!

1993 ಮುಂಬೈ ಭಯೋತ್ಪಾದಕ ದಾಳಿಯ ಆರೋಪಿ, ಭೂಗತ ಲೋಕದ ಗ್ಯಾಂಗ್‌ಸ್ಟರ್ ಅಬು ಸಲೇಂ ತಲೋಜಾ ಜೈಲಿನಲ್ಲಿ ರಾಜನಂತೆ ಮೆರೆಯುತ್ತಿದ್ದಾರೆ...
ಅಬು ಸಲೇಂ (ಸಂಗ್ರಹ ಚಿತ್ರ)
ಅಬು ಸಲೇಂ (ಸಂಗ್ರಹ ಚಿತ್ರ)
ಮುಂಬೈ: 1993 ಮುಂಬೈ ಭಯೋತ್ಪಾದಕ ದಾಳಿಯ ಆರೋಪಿ, ಭೂಗತ ಲೋಕದ ಗ್ಯಾಂಗ್‌ಸ್ಟರ್ ಅಬು ಸಲೇಂ ತಲೋಜಾ ಜೈಲಿನಲ್ಲಿ ರಾಜನಂತೆ ಮೆರೆಯುತ್ತಿದ್ದಾರೆ ಎಂದು ಜೈಲಾಧಿಕಾರಿ ಹೇಳಿದ್ದಾರೆ. ಸಲೇಂಗೆ ಜೈಲಿನಲ್ಲಿ ಸಹಾಯಕನಿದ್ದಾನೆ. ಮನೆಯಿಂದ ಕಳುಹಿಸಿಕೊಡುವ ಊಟ ತಿಂಡಿಗಳಲ್ಲದೆ, ಕೆಎಫ್‌ಸಿಯಿಂದಲೂ ಫ್ರೈಡ್ ಚಿಕನ್ ತಂದು ಜೈಲಿನಲ್ಲೇ ಇವರು ಪಾರ್ಟಿ ಮಾಡುತ್ತಿದ್ದಾರೆ ಎಂದು ಜೈಲಾಧಿಕಾರಿ ಹೀರಾಲಾಲ್ ಜಾದವ್ ಹೇಳಿದ್ದಾರೆ.
ಸಲೇಂನ ಅಪ್ಪಣೆಗೆ ತಕ್ಕಂತೆ ಕೆಲಸ ಮಾಡುವ ಸಹಚರನೊಬ್ಬ ಈತನೊಂದಿಗೆ ಸದಾ ಇರುತ್ತಾನೆ. ರಾಜಾ ಉತ್ತಲಿಂಗ ಎಂಬ ಕೈದಿಯೊಬ್ಬ ಸಲೇಂಗೆ ಎಲ್ಲ ಸಹಾಯಗಳನ್ನು ಮಾಡುತ್ತಾ ಕೆಲಸದವನ ಜವಾಬ್ದಾರಿ ಹೊತ್ತಿದ್ದಾನೆ. ಸಲೇಂನ ಬಟ್ಟೆ ಒಗೆಯುವುದು, ಆಹಾರ ತೆಗೆದಿರಿಸುವುದು, ಚಹಾ ಮಾಡಿಕೊಡುವುದು, ಸೆಲ್‌ನ್ನು ಶುಚಿಗೊಳಿಸುವುದು, ಪಾತ್ರೆ ತೊಳೆಯುವುದು ಹೀಗೆ ಎಲ್ಲ ಕಾರ್ಯಗಳಲ್ಲಿ ಉತ್ತಲಿಂಗ ಮಾಡಿಕೊಡುತ್ತಾನೆ ಎಂದು ಜಾದವ್ ಹೇಳಿದ್ದಾರೆ.
ಬೇರೆ ಯಾವ ಕೈದಿಗಳು ಕನಸಲ್ಲಿಯೂ ನಿರೀಕ್ಷೆ ಮಾಡಲು ಸಾಧ್ಯವಿಲ್ಲದ ರೀತಿಯಲ್ಲಿ  ಸಲೇಂ ಜೈಲಿನಲ್ಲಿ ರಾಜಾರೋಷವಾಗಿ ಬದುಕುತ್ತಿದ್ದಾನೆ. ಪ್ರತೀ ದಿನ ಸ್ನಾನಕ್ಕೆ ಬಿಸಿ ನೀರೇ ಬೇಕು, ಇದು ಸಿಗದಿದ್ದರೆ ಅಲ್ಲಿನ ದೃಶ್ಯವೇ ಬದಲಾಗುತ್ತದೆ. ಸಲೇಂನ ಸೆಲ್‌ನಿಂದ ಹಲವಾರು ಬಾರಿ ಮೊಬೈಲ್ ಚಾರ್ಜರ್ ಪತ್ತೆ ಹಚ್ಚಿದ್ದು, ಆತ ಮೊಬೈಲ್ ಬಳಸುತ್ತಿದ್ದ ಎಂಬುದಕ್ಕೆ ಇದೇ ಸಾಕ್ಷಿ.
ಇಷ್ಟೆಲ್ಲಾ ಅವಕಾಶಗಳನ್ನು ಕಲ್ಪಿಸುವುದು ಕಾನೂನು ವಿರುದ್ಧ ಎಂದು ನಾನು ಹೇಳಿದ್ದೆ. ಆದ್ದರಿಂದಲೇ ಸಲೇಂ ನನ್ನ ವಿರುದ್ಧ ವ್ಯಥಾರೋಪ ಮಾಡಿದ್ದ ಅಂತಾರೆ ಜಾದವ್.
ವಿಷಯುಕ್ತ ಇಂಜೆಕ್ಷನ್ ಕೊಟ್ಟು ನನ್ನನ್ನು ಹತ್ಯೆ ಮಾಡಲು ಯತ್ನಿಸುತ್ತಿದ್ದಾರೆ ಎಂದು ಸಲೇಂ ಜಾದವ್ ವಿರುದ್ಧ ಆರೋಪ ಮಾಡಿದ್ದನು. ಮಾತ್ರವಲ್ಲದೆ ಜೆಜೆ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದುಕೊಂಡು ಹೋಗಬೇಕಾದರೆ ಹಣ ಬೇಕೆಂದು ಜಾದವ್ ಕೇಳಿದ್ದರು ಎಂದು ಸಲೇಂ ಆರೋಪಿಸಿದ್ದಾನೆ.
ಈ ಆರೋಪಗಳೆಲ್ಲಾ ಸತ್ಯಕ್ಕೆ ದೂರವಾದುದು ಮತ್ತು ಇದೆಲ್ಲಾ ಜೈಲಿನಿಂದ ಹೊರಬರಲು ಸಲೇಂ ಮಾಡಿರುವ ಕಿತಾಪತಿ ಎಂದು ಜಾದವ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com