ಮಹಮ್ಮದ್ ಅಕ್ಲಾಖ್ ಅಗಲಿಕೆಯಿಂದ ಅಳುತ್ತಿರುವ ಕುಟುಂಬ (ಕೃಪೆ: ರಾಯಿಟರ್ಸ್ )
ದೇಶ
ಗೋಮಾಂಸ ರಾಜಕೀಯ!!
ಸಾಮಾನ್ಯ ಮನುಷ್ಯನೊಬ್ಬನ ಜೀವನದ ಜೊತೆ ಆಟವಾಡುತ್ತಾ ತಮ್ಮ ಬೇಳೆ ಬೇಯಿಸಿಕೊಳ್ಳುವ ರಾಜಕಾರಣಿಗಳ ಕಿತಾಪತಿಗಳು ಕೆಲವೊಮ್ಮೆ....
ದಾದ್ರಿ/ನವದೆಹಲಿ: ಉತ್ತರ ಪ್ರದೇಶದಲ್ಲಿ ಗೋಮಾಂಸಕ್ಕೆ ನಿಷೇಧವಿದ್ದರೂ ಮನೆಯಲ್ಲಿ ದನದ ಮಾಂಸ ಇಟ್ಟುಕೊಂಡಿದ್ದಾರೆ ಎಂಬ ವದಂತಿಯಿಂದ 50 ವರ್ಷ ಹರೆಯದ ಮಹಮ್ಮದ್ ಅಕ್ಲಾಖ್ ನನ್ನು ಹೊಡೆದು ಸಾಯಿಸಿದ ಘಟನೆ ಯಾವ ರೀತಿ 'ರಾಜಕೀಯ' ಜಟಾಪಟಿಯನ್ನು ಸೃಷ್ಟಿಸಿದೆ ಎಂಬುದಕ್ಕೆ ಇಲ್ಲಿದೆ ಕೆಲವು ಉದಾಹರಣೆಗಳು. ಸಾಮಾನ್ಯ ಮನುಷ್ಯನೊಬ್ಬನ ಜೀವನದ ಜೊತೆ ಆಟವಾಡುತ್ತಾ ತಮ್ಮ ಬೇಳೆ ಬೇಯಿಸಿಕೊಳ್ಳುವ ರಾಜಕಾರಣಿಗಳ ಕಿತಾಪತಿಗಳು ಕೆಲವೊಮ್ಮೆ ಸತ್ಯ ಘಟನೆಗಳ ದಿಶೆಯನ್ನೇ ಬದಲಾಯಿಸುತ್ತವೆ.
ಇಷ್ಟೊಂದು ಅಮಾನವೀಯ ಘಟನೆ ನಡೆದರೂ ಪ್ರಧಾನಿ ನರೇಂದ್ರ ಮೋದಿ ಮಾತ್ರ ಈ ಬಗ್ಗೆ ಈವರೆಗೆ ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ. ಆದರೆ ಇತರ ನಾಯಕರು ಹೇಗೆ ಅಸಂಬದ್ಧ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂಬುದಕ್ಕೆ ಇಲ್ಲಿವೆ ಉದಾಹರಣೆ
ಗ್ರೇಟರ್ ನೋಯ್ಡಾದ ದಾದ್ರಿ ಗ್ರಾಮದಲ್ಲಿ ಈ ಘಟನೆ ಆಕಸ್ಮಿಕವಾಗಿ ನಡೆದಿದೆ. ಅದಕ್ಕೆ ಕೋಮುಬಣ್ಣ ಬಳಿಯಬೇಕಿಲ್ಲ. ಏನೋ ತಪ್ಪು ಕಲ್ಪನೆಯಿಂದ ಹೀಗಾಗಿರಬಹುದು. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು
-ಕೇಂದ್ರ ಸಚಿವ ಮಹೇಶ್ ಶರ್ಮಾ
ಈ ಕೃತ್ಯದ ಹಿಂದೆ ಬಿಜೆಪಿ ಕೈವಾಡವಿದೆ ಎಂಬುದು ಪೊಲೀಸರು ನಡೆಸಿದ ತನಿಖೆಯಿಂದ ಸ್ಪಷ್ಟವಾಗಿದೆ. ಈ ಕೃತ್ಯ ಆಕಸ್ಮಿಕ ಎಂದು ಹೇಳಿದ ಶರ್ಮಾ ಅವರನ್ನು ವಜಾಗೊಳಿಸಬೇಕು
-ಆಪ್ ನಾಯಕ ಅಶುತೋಷ್
ಮನೆಯಲ್ಲಿ ಗೋಮಾಂಸವಿರಿಸಿಕೊಂಡಿದ್ದಾರೆ ಎಂಬ ಶಂಕೆಯ ಮೇರೆಗೆ ಹತ್ಯೆ ನಡೆದಿದೆ . ಈ ಘಟನೆ ನಮ್ಮ ಪ್ರಜಾಪ್ರಭುತ್ವದಲ್ಲಿನ ಕಪ್ಪು ಚುಕ್ಕಿ. ಅದು ಗೋಮಾಂಸ ಹೌದಾದರೂ , ಅಲ್ಲವಾದರೂ ಜನರ ಗುಂಪೊಂದು ಬಂದು ಒಬ್ಬ ವ್ಯಕ್ತಿಯನ್ನು ಕೊಲೆ
ಮಾಡಲು ಹೇಗೆ ಸಾಧ್ಯ ?
-ಆಲ್ ಇಂಡಿಯಾ ಮಜಿಲಿಸ್ ಇ ಇತ್ತೆಹದುಲ್ ಅಧ್ಯಕ್ಷ ಅಸಾವುದ್ದೀನ್ ಒವೈಸಿ
ಇದು ಪೂರ್ವ ನಿಯೋಜಿತ ಕೃತ್ಯ. ಪ್ರಧಾನಿ ನರೇಂದ್ರ ಮೋದಿಯವರು ಚುನಾವಣೆಗೆ ಮುನ್ನ ಹೇಳಿದ ಪಿಂಕ್ ರೆವಲ್ಯೂಷನ್ ಅಂದರೆ ಇದೇ. ಇದು ತಕ್ಷಣಕ್ಕೆ ನಡೆದ ಕೃತ್ಯವಲ್ಲ. ಇದು ಮೊದಲೇ ಯೋಜನೆ ಹೂಡಿ ಮಾಡಿದ ಕೃತ್ಯ.
-ಸಿಪಿಎಂ ನೇತಾರೆ ಬೃಂದಾ ಕಾರಾಟ್
ಹಿಂದೂಗಳಲ್ಲಿ ಜಾಗೃತಿ ಮೂಡಿಸುವವರ ಮೇಲೆ ಮತ್ತು ಹಿಂದೂಗಳ ಮೇಲೆ ಕೆಲವರು ಆರೋಪ ಮಾಡುತ್ತಿದ್ದಾರೆ. ನನ್ನ ನೋಟ ಸ್ಪಷ್ಟವಾಗಿದೆ. ಹಿಂದೂಗಳನ್ನು ಬೈಯುವುದನ್ನೇ ಕೆಲವರು ಫ್ಯಾಷನ್ ಮಾಡಿಕೊಂಡಿದ್ದಾರೆ. ಇದೊಂಥರ ಬೇಧಿಯಾದಂತೆ. ಅದು ಆದರೆ ಮಾತ್ರ ಅವರಿಗೆ ಸಮಾಧಾನವಾಗುತ್ತದೆ. ನಾನು ಇಂಥವರನ್ನು ತಡೆಯುವುದಿಲ್ಲ, ಅದು ಅವರ ಫ್ಯಾಷನ್.
-ವಿಹಿಂಪ ಪ್ರಧಾನ ಕಾರ್ಯದರ್ಶಿ ಚಂಪತ್ ರೈ
2017ರಲ್ಲಿ ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭಾ ಕ್ಷೇತ್ರ ಚುನಾವಣೆಗಾಗಿ ಕೇಸರಿ ಪಕ್ಷಗಳು ಸಿದ್ಧತೆ ನಡೆಸುತ್ತಿವೆ. ಮುಗ್ಧ ಮುಸ್ಲಿಮರನ್ನು ಬೇಟೆಯಾಡುವ ಮೂಲಕ ಕೋಮ ಗಲಭೆ ಸೃಷ್ಟಿಸಿ ಜನರನ್ನು ತಮ್ಮತ್ತ ಸೆಳೆಯುತ್ತಿವೆ
-ಉತ್ತರ ಪ್ರದೇಶ ಸಂಪುಟ ಸಚಿವ ಅಜಂ ಖಾನ್
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ