ದಾದ್ರಿ ಪ್ರಕರಣ: 70 ಜನರ ಮುಸ್ಲಿಂ ಕುಟುಂಬವನ್ನು ರಕ್ಷಿಸಿದ ಹಿಂದು ಯುವಕರು
ದಾದ್ರಿ: ಉತ್ತರ ಪ್ರದೇಶದ ಬಿಸಡಾಗಾಂವ್ ಗ್ರಾಮದಲ್ಲಿ ಮಾನವೀಯತೆಯಿಲ್ಲ ಎಂಬ ಮಾತುಗಳು ಒಂದೆಡೆ ಕೇಳಿಬರುತ್ತಿದ್ದರೆ ಮತ್ತೊಂದೆಡೆ ಗ್ರಾಮವು ಮಾನವೀಯತೆಯಿಂದ ಸಂಪೂರ್ಣ ವಿಮುಖವಾಗಿಲ್ಲ ಎಂಬ ಸಂದೇಶ ಸಾರುವ ಸಂಗತಿಯೊಂದು ತಡವಾಗಿ ಬೆಳಕಿಗೆ ಬಂದಿದೆ.
ಗೋ ಹತ್ಯೆ ಹಾಗೂ ಗೋಮಾಂಸ ಸೇವನೆ ಶಂಕೆ ಹಿನ್ನೆಲೆಯಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬನನ್ನು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ಆಸಕ್ತಿದಾಯಕ ಮಾನವೀಯ ಸಂಗತಿಗಳು ಈಗಷ್ಟೇ ಹೊರಬೀಳುತ್ತಿವೆ. ಹತ್ಯೆ ನಡೆಯುವುದಕ್ಕೂ ಮೊದಲು ಗುಂಪೊಂದು ಮುಸ್ಲಿಮರ ಮೇಲೆ ದಾಳಿ ಮಾಡುತ್ತಿದೆ ಎಂಬ ಮಾಹಿತಿ ತಿಳಿದ ಅದೇ ಗ್ರಾಮದ ಮೂವರು ಯುವಕರು ಸ್ಥಳದಲ್ಲಿ 70 ಜನರ ಮುಸ್ಲಿಮರ ಕೂಡು ಕುಟುಂಬವೊಂದನ್ನು ರಕ್ಷಿಸಿರುವ ಮಾಹಿತಿ ಶುಕ್ರವಾರ ಹೊರಬಂದಿದೆ.
ವಿನೀತ್ ಕುಮಾರ್, ಉಮೇಶ್ ಕುಮಾರ್ ಮತ್ತು ಅಶೋಕ್ ಎಂಬುವವರು ಮುಸ್ಲಿಂ ಕುಟುಂಬದ ನೆರೆ ಮನೆಯವರಾಗಿದ್ದರು. ಗೋಮಾಂಸ ಸೇವನೆ ಕುರಿತಂತೆ ಗುಂಪೊಂದು ಮುಸ್ಲಿಮರ ಮೇಲೆ ದಾಳಿ ಮಾಡಲು ಬರುತ್ತಿದ್ದಾರೆಂಬ ಮಾಹಿತಿಯನ್ನು ತಿಳಿದ ಈ ಯುವಕರು ವಿಷಯವನ್ನು ನೆರೆಮನೆಯ ಮುಸ್ಲಿಂ ಕುಟುಂಬಕ್ಕೆ ತಿಳಿಸಿದ್ದಾರೆ. ನಂತರ ಮೂವರೂ ಸೇರಿ 70ಜನರಿದ್ದ ಈ ಕುಟುಂಬವನ್ನು ಕೇವಲ 2 ಗಂಟೆಗಳೊಳಗೆ ಸುರಕ್ಷಿತ ಪ್ರದೇಶಕ್ಕೆ ರವಾನಿಸಿದ್ದಾರೆ.
ತಮ್ಮ ರಕ್ಷಣೆ ಕುರಿತಂತೆ ಖಾಸಗಿ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಅಬ್ದುಲ್ ಮೊಹಮ್ಮದ್ ಅವರು, ಯುವಕರು ನಮ್ಮನ್ನು ರಕ್ಷಿಸಿಲ್ಲವೆಂದಿದ್ದರೆ ಇಂದು ನಾವು ಬದುಕುಳಿಯಲು ಸಾಧ್ಯವಾಗುತ್ತಿರಲಿಲ್ಲ ಎಂದು ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ