
ಬಿಜಪುರ (ಉತ್ತರ ಪ್ರದೇಶ): ಊಟ ಮಾಡುವಾಗ ಶಿರವಸ್ತ್ರ (ಹಿಜಬ್) ಜಾರಿದ್ದಕ್ಕೆ 4 ವರ್ಷದ ಮಗಳನ್ನು ತಂದೆಯೊಬ್ಬ ಅಮಾನವೀಯವಾಗಿ ಹತ್ಯೆ ಮಾಡಿರುವ ಘಟನೆಯೊಂದು ಉತ್ತರ ಪ್ರದೇಶದ ಬಿಜಪುರದಲ್ಲಿ ಶುಕ್ರವಾರ ನಡೆದಿದೆ.
ಫರ್ಹೀನ್ (4) ಮೃತ ಬಾಲಕಿ. ಬಾಲಕಿ ಶಿರವಸ್ತ್ರ (ಹಿಜಬ್) ಸರಿಯಾಗಿ ಧರಿಸಿಲ್ಲದ ಕಾರಣ ಊಟ ಮಾಡುವಾಗ ಶಿರವಸ್ತ್ರ ಜಾರಿ ಕೆಳಗೆ ಬಿದ್ದಿದೆ. ಊಟ ಮಾಡುವತ್ತ ಗಮನ ಹರಿಸಿದ್ದ ಬಾಲಕಿಗೆ ಇದು ಗಮನಕ್ಕೆ ಬಂದಿಲ್ಲ. ಇದನ್ನು ಕಂಡ ಬಾಲಕಿಯ ತಂದೆ ಜಾಫರ್ ಹುಸೇನ್ ತೀವ್ರವಾಗಿ ಕೆಂಡಾಮಂಡಲವಾಗಿದ್ದಾನೆ. ನಂತರ ಬಾಲಕಿಯನ್ನು ಎತ್ತಿಕೊಂಡು ಸಾಯವಂತೆ ನೆಲಕ್ಕೆ ಬಡಿದಿದ್ದಾನೆ. ಬಾಲಕಿಯ ಕಿರುಚಾಟ ಕೇಳಿದ ತಾಯಿ ನೆರೆಮನೆಯವರನ್ನು ಕೂಗಿದ್ದಾಳೆ. ಆದರೆ, ಜಾಫರ್ ನ ಸ್ಥಿತಿ ಕಂಡ ನೆರೆಮನೆಯವರಾರು ಮನೆಯೊಳಗೆ ಹೋಗಲಿಲ್ಲ ಎಂದು ಮೂಲಗಳಿಂದ ತಿಳಿದುಬಂದಿದೆ.
ತಂದೆಯ ಹೊಡೆತದಿಂದಾಗಿ ಬಾಲಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಬಾಲಕಿ ಸತ್ತಿರುವುದನ್ನು ಕಂಡ ಜಾಫರ್ ನಂತರ ಮೃತದೇಹವನ್ನು ಮನೆಯೊಳಗೇ ಅಂತ್ಯ ಸಂಸ್ಕಾರ ಮಾಡುವಂತೆ ಪತ್ನಿಗೆ ಒತ್ತಡ ಹೇರಿದ್ದಾನೆ. ಆದರೆ, ಇದಕ್ಕೊಪ್ಪದ ಬಾಲಕಿಯ ತಾಯಿ ವಿಚಾರವನ್ನು ಸ್ಥಳೀಯ ಪೊಲೀಸರಿಗೆ ತಿಳಿಸಿದ್ದಾಳೆ. ಸ್ಥಳಕ್ಕಾಗಮಿಸಿದ ಪೊಲೀಸರು ಇದೀಗ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿ ಶರೀಫ್ ನನ್ನು ಬಂಧಕ್ಕೊಳಪಡಿಸಿ ವಿಚಾರಣೆ ನಡೆಸುತ್ತಿದ್ದಾರೆ.
Advertisement