
ಮುಂಬೈ: ಏರ್ ಟೆಲ್ 4ಜಿ ತ್ವರಿತ ಸೇವೆ ಕುರಿತು ಇತ್ತೀಚೆಗೆ ಚಾನೆಲ್ ಗಳಲ್ಲಿ ಪ್ರಸಾರವಾಗುತ್ತಿರುವ ಜಾಹೀರಾತು ಜನರನ್ನು ದಾರಿತಪ್ಪಿಸುತ್ತಿದೆ ಎಂದು ಗ್ರಾಹಕರೊಬ್ಬರು ನೀಡಿರುವ ದೂರಿನ ಮೇರೆಗೆ ಏರ್ ಟೆನ್ ದೂರವಾಣಿ ನಿರ್ವಾಹಕರಿಗೆ ಭಾರತೀಯ ಜಾಹೀರಾತು ನಿರ್ವಹಣಾ ಮಂಡಳಿ ನೊಟೀಸ್ ಕಳುಹಿಸಿದೆ.
ದೇಶಾದ್ಯಂತ 4ಜಿ ಸೇವೆಯನ್ನು ಆರಂಭಿಸಿದ ನಂತರ ಏರ್ ಟೆಲ್ ಕಳೆದ ಆಗಸ್ಟ್ ತಿಂಗಳಿನಿಂದ ಅದಕ್ಕೆ ಸಂಬಂಧಪಟ್ಟಂತೆ'' ಇದಕ್ಕಿಂತ ವೇಗವಾದ ನೆಟ್ ವರ್ಕ್ ಹೊಂದಿರುವ ಇಂಟರ್ ನೆಟ್ ಸೇವೆ ಸಿಕ್ಕಿದರೆ ನಿಮ್ಮ ಜೀವಾವಧಿಯ ಮೊಬೈಲ್ ಬಿಲ್ ಉಚಿತವಾಗಿ ನೀಡುತ್ತೇವೆ ಅಂತ ಜಾಹೀರಾತು ಪ್ರಸಾರವಾಗುತ್ತಿದೆ.
ಆದರೆ ಜಾಹೀರಾತನ್ನು ವೈಭವೀಕರಿಸಲಾಗಿದ್ದು, ಉಳಿದೆಲ್ಲಾ ಮೊಬೈಲ್ ಕಂಪೆನಿಗಳು ನಿಷ್ಪಯೋಜಕ ಎಂಬ ಅರ್ಥ ಬರುತ್ತದೆ ಎಂದು ಗ್ರಾಹಕರೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಜಾಹೀರಾತು ಪ್ರಾಧಿಕಾರ ಕಂಪೆನಿಗೆ ನೊಟೀಸ್ ಜಾರಿ ಮಾಡಿದೆ. ಜಾಹೀರಾತನ್ನು ಹಿಂತೆಗೆದುಕೊಳ್ಳುವುದು ಅಥವಾ ಮಾರ್ಪಾಡು ಮಾಡುವಂತೆ ಅಥವಾ ವಿಮರ್ಶೆ ಮಾಡುವಂತೆ ಪ್ರಾಧಿಕಾರ ಕಂಪೆನಿಗೆ ಸೂಚಿಸಿದ್ದು, ಇದೇ 7ರೊಳಗೆ ಉತ್ತರಿಸುವಂತೆ ಆದೇಶ ನೀಡಿದೆ.
ಜಾಹೀರಾತು ಪ್ರಾಧಿಕಾರದ ಕೋಡ್ ಸಂಖ್ಯೆ 1.4ರ ಪ್ರಕಾರ, ಜಾಹಿರಾತುಗಳು ನೇರವಾಗಿ ಅಥವಾ ಸೂಚನೆಯ ಮೂಲಕ ದ್ವಂದ್ವಾರ್ಥವನ್ನು ಕೊಡುವಂತೆ ಮತ್ತು ಉತ್ಪ್ರೇಕ್ಷೆ ಹೊಂದುವಂತೆ ಇರಬಾರದು. ಮೂಲಕ ಪ್ರಚಾರ ಉತ್ಪನ್ನ ಅಥವಾ ಗ್ರಾಹಕರನ್ನು ದಾರಿತಪ್ಪಿಸುವಂತಿರಬಾರದು ಎಂದು ಹೇಳಲಾಗಿದೆ.
ಪ್ರಾಧಿಕಾರದ ನೊಟೀಸ್ ಬಗ್ಗೆ ಪ್ರತಿಕ್ರಿಯಿಸಿರುವ ಭಾರ್ತಿ ಏರ್ ಟೆಲ್ ಕಂಪೆನಿ, ಕಠಿಣ ಪರೀಕ್ಷೆಗಳನ್ನು ಮಾಡಿಯೇ ಈ ಜಾಹೀರಾತನ್ನು ನೀಡಲಾಗಿದೆ. ತ್ವರಿತಗತಿಯಲ್ಲಿ 4ಜಿ ಇಂಟರ್ನೆಟ್ ಸೇವೆಯನ್ನು ನೀಡುತ್ತೇವೆ ಎಂದು ಹೇಳಿ ಜಾಹೀರಾತು ನೀಡಿದ್ದೇವೆಯೇ ಹೊರತು ಅದರಲ್ಲಿ ಉತ್ಪ್ರೇಕ್ಷೆ ಇಲ್ಲ ಎಂದು ಸ್ಪಷ್ಟಪಡಿಸಿದೆ. ಜಾಹೀರಾತಿನಲ್ಲಿ ತಿಳಿಸಿರುವಂತೆ ಜಾಹೀರಾತು ಪ್ರಾಧಿಕಾರಕ್ಕೆ ಅಗತ್ಯವಿರುವ ತಾಂತ್ರಿಕ ದಾಖಲೆಗಳನ್ನು ಒದಗಿಸಲು ಪ್ರಾಧಿಕಾರ ಸಿದ್ದವಿದೆ ಎಂದು ತಿಳಿಸಿದೆ.
Advertisement