ಇಂದ್ರಾಣಿ ಊಟಕ್ಕೆ ವಿಷ? ಜೈಲು ಸಿಬ್ಬಂದಿ, ಅಡುಗೆಯವರ ವಿಚಾರಣೆ

ಶೀನಾ ಬೋರಾ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಇಂದ್ರಾಣಿ ಮುಖರ್ಜಿ ದಿಢೀರ್ ಅಸ್ವಸ್ಥತೆಯ ಸುತ್ತ ಹಲವು ಅನುಮಾನಗಳು ಹುಟ್ಟಿಕೊಂಡಿದ್ದು, ಇದೀಗ...
ಶೀನಾ ಬೋರಾ -ಇಂದ್ರಾಣಿ ಮುಖರ್ಜಿ
ಶೀನಾ ಬೋರಾ -ಇಂದ್ರಾಣಿ ಮುಖರ್ಜಿ

ಮುಂಬೈ: ಶೀನಾ ಬೋರಾ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಇಂದ್ರಾಣಿ ಮುಖರ್ಜಿ ದಿಢೀರ್ ಅಸ್ವಸ್ಥತೆಯ ಸುತ್ತ ಹಲವು ಅನುಮಾನಗಳು ಹುಟ್ಟಿಕೊಂಡಿದ್ದು, ಇದೀಗ ಪೊಲೀಸರು ಇಂದ್ರಾಣಿಗೆ ನೀಡಿದ ಊಟದಲ್ಲಿ ವಿಷ ಬೆರೆಸಲಾಗಿತ್ತೇ ಎಂಬ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.

ಪ್ರಕರಣದ ತನಿಖೆಗೆ ನಡೆಸುತ್ತಿರುವ ಪೊಲೀಸರು ಈ ಸಂಬಂಧ ಬೈಕುಲ್ಲಾ ಜೈಲು ಸಿಬ್ಬಂದಿ ಹಾಗೂ ಅಡುಗೆಯವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

ಇಂದ್ರಾಣಿ ಚಿಕಿತ್ಸೆ ಪಡೆಯುತ್ತಿರುವ ಜೆಜೆ ಆಸ್ಪತ್ರೆಯ ದಾಖಲೆಗಳ ಪ್ರಕಾರ, ಆಕೆ ಎರಡು ದಿನಗಳ ಕಾಲ ಪ್ರಜ್ಞಾಹೀನ ಸ್ಥಿತಿಯಲ್ಲೇ ಇದ್ದಳು ಎನ್ನಲಾಗಿದೆ. ಇನ್ನು ವೈದ್ಯರು ಸಹ ಈ ಮೊದಲು ಮಾತ್ರೆಗಳ ಪ್ರಮಾಣ ಜಾಸ್ತಿಯಾಗಿ ಅಸ್ವಸ್ಥರಾಗಿರುವ ಶಂಕೆ ವ್ಯಕ್ತಪಡಿಸಿದ್ದರು. ಆದರೆ ವಿಧಿ ವಿಜ್ಞಾನ ಪ್ರಯೋಗಾಲದ ಇಂದ್ರಾಣಿ ರಕ್ತ ಹಾಗೂ ಮೂತ್ರ ಪರೀಕ್ಷೆಯ ವರದಿ ಈ ಸಾಧ್ಯತೆಯನ್ನು ತಳ್ಳಿಹಾಕಿದೆ.

ಜೈಲಿನಲ್ಲಿ ಯಾರಾದರೂ ಇಂದ್ರಾಣಿಗೆ ಊಟದಲ್ಲಿ ವಿಷ ಬೆರೆಸಿ ಹತ್ಯೆ ಮಾಡುವ ಯತ್ನ ಮಾಡಿದ್ದಾರೆಯೇ ಎಂಬುದರ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಮಹಾರಾಷ್ಟ್ರ ಗೃಹ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

'ಹಲವು ದಿನಗಳಿಂದ ಇಂದ್ರಾಣಿ ಮೂರ್ಛೆ ರೋಗಕ್ಕೆ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದಳು. ಹೀಗಾಗಿ ಅದನ್ನು ಮುಂದುವರೆಸಿಕೊಂಡು ಹೋಗಲು ಅನುಮತಿ ನೀಡಲಾಗಿದೆ. ಆದರೆ ಆಕೆಗೆ ಆತ್ಮಹತ್ಯೆ ಮಾಡಿಕೊಳ್ಳಲು ಜೈಲು ಸಿಬ್ಬಂದಿ ಸಹಕರಿಸಿರುವ ಸಾಧ್ಯತೆ ಕಾಣುತ್ತಿಲ್ಲ' ಎಂದಿದ್ದಾರೆ.

'ಯಾರಾದರೂ ಇಂದ್ರಾಣಿಗೆ ವಿಷ ನೀಡಿ ಕೊಲೆ ಮಾಡುವ ಯತ್ನ ನಡೆಸಿದ್ದಾರೆಯೇ ಎಂಬುದರ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದ್ದು, ಈ ಸಂಬಂಧ ತನಿಖಾಧಿಕಾರಿ ಜೈಲು ಅಧಿಕಾರಿ, ಇತರೆ ಸಿಬ್ಬಂದಿ ಹಾಗೂ ಅಡುಗೆಯವರು ಸೇರಿದಂತೆ ಇಂದ್ರಾಣಿ ಜತೆ ಸಂಪರ್ಕದಲ್ಲಿರುವ ಎಲ್ಲರ ಹೇಳಿಕೆಗಳನ್ನು' ದಾಖಲಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ಪೊಲೀಸ್ ಮಹಾನಿರ್ದೇಶ(ಜೈಲು) ಬಿಪಿನ್ ಕುಮಾರ್ ಸಿಂಗ್ ಅವರು ಇಂದ್ರಾಣಿ ಅಸ್ವಸ್ಥತೆಗೆ ಸಂಬಂಧಿಸಿದಂತೆ ಶುಕ್ರವಾರದೊಳಗೆ ವರದಿ ನೀಡಲಿದ್ದಾರೆ ಎಂದು ಗೃಹ ಕಾರ್ಯದರ್ಶಿ ವಿಜಯ್ ಸತ್ಬಿರ್ ಅವರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com