ಅಖಿಲೇಶ್ ಯಾದವ್
ದೇಶ
ಬಿಜೆಪಿ ಪುಡಿಗುಂಪುಗಳ ದುಷ್ಕೃತ್ಯಕ್ಕೆ ಮೋದಿ ಕಾರಣ: ಅಖಿಲೇಶ್
ಸಂಘಪರಿವಾರದಲ್ಲಿ ಪುಡಿ ಗುಂಪುಗಳು ಸೃಷ್ಟಿಯಾಗಿ ಕಿಡಿಗೇಡಿತನ ಎಸಗಲು ಪ್ರಧಾನಿ ನರೇಂದ್ರ ಮೋದಿಯೇ ನೇರ ಕಾರಣ ಎಂದು ಉತ್ತರಪ್ರದೇಶ ಮುಖ್ಯಮಂತ್ರಿ...
ಲಖನೌ: ಸಂಘಪರಿವಾರದಲ್ಲಿ ಪುಡಿ ಗುಂಪುಗಳು ಸೃಷ್ಟಿಯಾಗಿ ಕಿಡಿಗೇಡಿತನ ಎಸಗಲು ಪ್ರಧಾನಿ ನರೇಂದ್ರ ಮೋದಿಯೇ ನೇರ ಕಾರಣ ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಆರೋಪಿಸಿದ್ದಾರೆ. ಈ ಮೂಲಕ ಮೋದಿ ವಿರುದ್ಧ ನೇರ ವಾಗ್ದಾಳಿ ನಡೆಸಿದ್ದಾರೆ.
ಫೇಸ್‍ಬುಕ್, ಟ್ವಿಟರ್, ಗೂಗಲ್ ಮೂಲಕ ಜನರನ್ನು ಸೆಳೆಯುವುದರಲ್ಲಿ ನಿರತರಾಗಿರುವ ಮೋದಿ ತನ್ನವರಿಂದಲೇ ವಿರೋಧಕ್ಕೆ ಒಳಗಾಗಿದ್ದಾರೆ. ವ್ಯಕ್ತಿ ಏನು ತಿನ್ನುತ್ತಾನೆ, ಯಾವ ಬಟ್ಟೆ ಧರಿಸುತ್ತಾನೆ, ಎಂಬುದು ಮುಖ್ಯವಾಗಕೂಡದು. ಉದ್ದೇಶಗಳು ಸ್ಪಷ್ಟವಿರಬೇಕು. ಅಭಿವೃದ್ಧಿಗೆ ಅಗತ್ಯ ವಾತಾವರಣ ಸೃಷ್ಟಿಸಬೇಕು. ಇದನ್ನು ಮೋದಿ ಅರಿಯಬೇಕು ಎಂದು ಖಾಸಗಿ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ದಾದ್ರಿ ದುರ್ಘಟನೆಗೂ ಬಿಜೆಪಿಯ ಕೊಳಕು ರಾಜಕಾರಣವೇ ಕಾರಣ ಎಂದು ಖಂಡಿಸಿದ ಅಖಿಲೇಶ್, ತಮ್ಮ ಸರ್ಕಾರದ ಕ್ರಮದಿಂದ ಸಂತ್ರಸ್ತ ಕುಟುಂಬಕ್ಕೆ ಸಮಾಧಾನ ಸಿಕ್ಕಿದೆ ಎಂದಿದ್ದಾರೆ. ಹಲವು ವದಂತಿ ಹಬ್ಬಿಸಿ, ಧಾರ್ಮಿಕ ವೆಬ್‍ಸೈಟ್‍ಗಳ ಮೂಲಕ ಘೋಷಣೆಗಳನ್ನು ಹರಡಿ ಅನಾಹುತ ಮಾಡಿದ ಬಿಜೆಪಿ, ಈಗ ಘಟನೆ ಯನ್ನು ಆಕಸ್ಮಿಕ ಎಂದು ಹೇಳಿ ನುಣುಚಿ ಕೊಳ್ಳುತ್ತಿದೆ ಎಂದೂ ಅಖಿಲೇಶ್ ಆರೋ ಪಿಸಿದ್ದಾರೆ.
ಇದೇ ವೇಳೆ ಬಿಜೆಪಿ ನಾಯ ಸಂಗೀತ್ ಸೋಮ್ ಭೇಟಿ ಬಗ್ಗೆ ಪ್ರಸ್ತಾಪಿಸಿದಾಗ ಅವರು, ಎಲ್ಲ ವ್ಯಕ್ತಿಗಳ ಪ್ರತಿಕ್ರಿಯೆಗಳ ವಿಡಿಯೋ ರೆಕಾರ್ಡ್ ನಮ್ಮಲ್ಲಿದೆ. ಕೋಮುಗಲಭೆ ಸೃಷ್ಟಿಸುವ ಪ್ರಯತ್ನ ಯಾರಾದರೂ ಮಾಡಿದಲ್ಲಿ, ಕಾನೂನು ರೀತಿ ಗಂಭೀರ ಕ್ರಮ ತೆಗೆದುಕೊಳ್ಳುವುದು ಖಂಡಿತ ಎಂದು ಎಚ್ಚರಿಸಿದ್ದಾರೆ. ಗೋಮಾಂಸ ನಿಷೇಧವನ್ನು ಬೆಂಬಲಿಸುತ್ತೀರಾ ಎಂಬ ಪ್ರಶ್ನೆಗೆ ಅವರು ನೇರವಾಗಿ ಉತ್ತರಿಸಲು ನಿರಾಕರಿಸಿ, ಗಾಂಧೀಜಿಯವರ ಈ ಕುರಿತ ಬರಹಗಳನ್ನು ಜನ ಓದಿ ನಿರ್ಧರಿಸಲಿ ಎಂದರು.
ಮಾಂಸದ ತುಂಡು ಪತ್ತೆ: ಇಖ್ಲಾಕ್ ಸಾವಿನಿಂದಾಗಿ ಬೂದಿ ಮುಚ್ಚಿದ ಕೆಂಡದಂತಾಗಿರುವ ಉತ್ತರಪ್ರದೇಶದಲ್ಲಿ ದಿನೇ ದಿನೆ ಹೊಸ ಹೊಸ ಬೆಳವಣಿಗೆಗಳು ನಡೆಯುತ್ತಿವೆ. ಭಾನುವಾರ ರಾತ್ರಿ ಚಿತೇರಾ ಗ್ರಾಮದಲ್ಲಿ ಮಾಂಸದ ತುಂಡುಗಳು ಪತ್ತೆಯಾಗಿದ್ದು, ಬಿಷಾಡಾದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಉದ್ರಿಕ್ತ ಸ್ಥಿತಿ ನಿರ್ಮಾಣವಾಗಿದೆ. ಕೋಮು ಗಲಭೆ ಸೃಷ್ಟಿಸಲೆಂದೇ ಯಾರೋ ಈ ರೀತಿ ಮಾಂಸದ ತುಂಡುಗಳನ್ನು ಇಟ್ಟಿದ್ದಾರೆ ಎಂದು ದಾದ್ರಿ ಡಿಎಸ್ಪಿ ಅನುರಾಗ್ ಸಿಂಗ್ ತಿಳಿಸಿದ್ದಾರೆ.
ದಾದ್ರಿ ಪ್ರಕರಣ: ರಾಜ್ಯಗಳಿಗೆ ಸೂಚನೆ ದೇಶದ ಜಾತ್ಯತೀತ ರಚನೆಯನ್ನು ದುರ್ಬಲಗೊಳಿಸುವ ಶಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಗಳಿಗೆ ಕೇಂದ್ರ ಗೃಹ ಸಚಿವಾಲಯ ಸೂಚಿಸಿದೆ. ದಾದ್ರಿ ಸೇರಿ ದೇಶಾದ್ಯಂತ ಹೆಚ್ಚುತ್ತಿರುವ ಕೋಮುಗಲಭೆ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿರುವ ಇಲಾಖೆ, ಧಾರ್ಮಿಕ ಭಾವನೆ ಕೆರಳಿಸುವವರ ವಿರುದ್ಧ ಕ್ರಮ ಕೈಗೊಳ್ಳಿ ಎಂದಿದೆ. ಈ ನಡುವೆ, ಉತ್ತರ ಪ್ರದೇಶ ಸರ್ಕಾರ ಕೂಡ ಟ್ವಿಟರ್ ನಿಂದ ಮಾಹಿತಿ ಕೇಳಿದೆ.


