ನವದೆಹಲಿ: ಭಾರತದ ಸಂಸ್ಕೃತಿಗೆ ಧಕ್ಕೆ ತರುವಂಥಾ ಘಟನೆಗಳಿಗೆ ನಾವು ಆಸ್ಪದಕೊಡುವುದಿಲ್ಲ, ವೈವಿಧ್ಯತೆಯಲ್ಲಿ ಏಕತೆಯನ್ನು ಮೆರೆಯುವ ದೇಶ ನಮ್ಮದು. ನಾವು ಪರಸ್ಪರ ಸಹಕಾರ, ಸಾಮರಸ್ಯದಿಂದ ಬಾಳಿ ಬದುಕಬೇಕು ಎಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಹೇಳಿದ್ದಾರೆ.
ಬುಧವಾರ ರಾಷ್ಟ್ರಪತಿ ಭವನದಲ್ಲಿ ನಡೆದ ಪುಸ್ತಕ ಬಿಡುಗಡೆ ಸಮಾರಂಭವೊಂದರಲ್ಲಿ ಮಾತನಾಡಿದ ಅವರು ಜನರು ಸಾಮರಸ್ಯ ಕಾಪಾಡಬೇಕು ಎಂದು ಮನವಿ ಮಾಡಿದ್ದಾರೆ.
ದಾದ್ರಿ ಘಟನೆಯ ಬಗ್ಗೆ ಖೇದ ವ್ಯಕ್ತ ಪಡಿಸಿದ ಮುಖರ್ಜಿ, ನಮ್ಮ ಹಳೇ ಮೌಲ್ಯಗಳು ಈಗ ನಶಿಸಿ ಹೋಗುತ್ತಿವೆ. ನಮ್ಮ ಪ್ರಜಾಪ್ರಭುತ್ವಕ್ಕೆ ಅದರದ್ದೇ ಆದ ಗೌರವವಿದೆ. ಅದನ್ನು ಮನಸ್ಸಲ್ಲಿಟ್ಟುಕೊಂಡರೆ ನಾವು ನಮ್ಮ ಪ್ರಜಾಪ್ರಭುತ್ವವನ್ನು ಕಾಪಾಡಬಹುದು.
ಗೋಮಾಂಸ ಭಕ್ಷಿಸಿದ್ದಾನೆ ಎಂಬ ಸಂದೇಹದಡಿಯಲ್ಲಿ ಉತ್ತರ ಪ್ರದೇಶದ ದಾದ್ರಿಯಲ್ಲಿ 52 ರ ಹರೆಯದ ಮೊಹಮ್ಮದ್ ಅಖ್ಲಾಕ್ ಎಂಬಾತನನ್ನು ಹೊಡೆದು ಸಾಯಿಸಲಾಗಿತ್ತು. ಈ ಘಟನೆಯ ಬಗ್ಗೆ ರಾಜಕಾರಣಿಗಳು ಬಾಯಿಗೆ ಬಂದಂತೆ ಹೇಳಿಕೆ ನೀಡುತ್ತಿರುವುದೂ ವಿವಾದ ಸೃಷ್ಟಿಸುತ್ತಿದೆ.