ಪತ್ನಿಗೆ ವಾಟ್ಸ್ ಆಪ್ ನಲ್ಲಿ ತಲಾಕ್ ಮೇಸೆಜ್ ಕಳಿಸಿದ ಎನ್‍ಆರ್‍ಐ

ಸಾಮಾಜಿಕ ಅಂತರರ್ಜಾಲಗಳಾದ ಸ್ಕೈಪ್, ವಾಟ್ಸ್ ಆಪ್, ಮೆಸೆಂಜರ್ ಗಳಲ್ಲಿ ತಲಾಕ್ ನೀಡುವ ಕುರಿತು ಮುಸ್ಲಿಂ ಮಹಿಳೆಯರು ಆತಂಕ ವ್ಯಕ್ತಪಡಿಸಿದ್ದ ಬೆನ್ನಲ್ಲೇ ಕೇರಳ ಮೂಲದ ಯುವತಿಗೆ ದುಬೈ ಯುವಕ ವಾಟ್ಸ್ ಆಪ್ ನಲ್ಲಿ ಮೂರು ಬಾರಿ ತಲಾಕ್ ಮೇಸೆಜ್ ಕಳಿಸಿದ್ದಾನೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕೊಟ್ಟಾಯಂ: ಸಾಮಾಜಿಕ ಅಂತರರ್ಜಾಲಗಳಾದ ಸ್ಕೈಪ್, ವಾಟ್ಸ್ ಆಪ್, ಮೆಸೆಂಜರ್ ಗಳಲ್ಲಿ ತಲಾಕ್ ನೀಡುವ ಕುರಿತು ಮುಸ್ಲಿಂ ಮಹಿಳೆಯರು ಆತಂಕ ವ್ಯಕ್ತಪಡಿಸಿದ್ದ ಬೆನ್ನಲ್ಲೇ ಕೇರಳ ಮೂಲದ ಯುವತಿಗೆ ದುಬೈ ಯುವಕ ವಾಟ್ಸ್ ಆಪ್ ನಲ್ಲಿ ಮೂರು ಬಾರಿ ತಲಾಕ್ ಮೇಸೆಜ್ ಕಳಿಸಿದ್ದಾನೆ.

ಅಲ್ಲಾಪುಝ್ಜಾದ 21ವರ್ಷದ ಯುವತಿಗೆ ದುಬೈ ಯುವಕನೊಂದಿಗೆ ನಾಲ್ಕು ವಾರಗಳ ಹಿಂದಷ್ಟೇ ನಿಖಾ ನಡೆದಿತ್ತು. ಎನ್‍ಆರ್‍ಐ ವರನಿಗೆ ಯುವತಿ ಕಡೆಯವರು 10 ಲಕ್ಷ ಹಾಗೂ 80 ಸವರನ್ ಚಿನ್ನ ಹಾಕಿ ಅದ್ಧೂರಿಯಾಗಿ ಮದುವೆ ಮಾಡಿಕೊಡಲಾಗಿತ್ತು. ನಿಖಾ ನಂತರ ದುಬೈಗೆ ಹೋಗಿದ್ದ ಗಂಡ ಹೆಂಡತಿಗೆ ವಾಟ್ಸ್ ಆಪ್ ನಲ್ಲಿ ಮೂರು ಬಾರಿ ತಲಾಕ್ ಎಂದು ಕಳಿಸಿದ್ದು, ಮೇಸೆಜ್ ನೋಡಿದ ಯುವತಿ ದಂಗಾಗಿದ್ದಾಳೆ.

ಈ ಸಂಬಂಧ ಗೃಹಿಣಿ ಕೊಟ್ಟಾಯಂನ ಪಾಲಾದಲ್ಲಿರುವ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾಳೆ.

ಇತ್ತೀಚಿನ ಅಧ್ಯಯನವೊಂದರ ಪ್ರಕಾರ, ಮುಸ್ಲಿಂ ಸಮುದಾಯದಲ್ಲಿ ಮೂರೂ ಬಾರಿ ಬಾಯಿಮಾತಿನ ತಲಾಕ್ ಹೇಳಿ ವಿಚ್ಚೇಧನ ನೀಡುವ ಪದ್ಧತಿಯನ್ನು ರದ್ದು ಮಾಡಿ ಎಂಬ ಮುಸ್ಲಿಂ ಮಹಿಳೆಯರ ಕೂಗು ಹೆಚ್ಚಿತ್ತು. ಇದೇ ಮೊದಲ ಬಾರಿಗೆ ಈ ಮೂರೂ ಬಾರಿ ತಲಾಕ್ ಹೇಳುವ ಪದ್ಧತಿ 'ತುಳಿಯುವ' ಮನಸ್ಥಿತಿಯದ್ದು ಎಂದು 92.1% ಮುಸ್ಲಿಂ ಮಹಿಳೆಯರು ಅಭಿಪ್ರಾಯಪಟ್ಟಿದ್ದಾರೆ.

ಅಧ್ಯಯನದಲ್ಲಿ ಭಾಗಿಯಾಗಿರುವ ಕುಟುಂಬಗಳಲ್ಲಿ 73% ಕುಟುಂಬಗಳ ವಾರ್ಷಿಕ ಆದಾಯ 50 ಸಾವಿರಕ್ಕಿಂತಲೂ ಕಡಿಮೆ ಹಾಗೂ 55% ಮಹಿಳೆಯರು ತಮ್ಮ 18ನೇ ವಯಸ್ಸಿಗೇ ಮದುವೆಯಾಗಿದ್ದು, 82% ಜನಕ್ಕೆ ತಮ್ಮ ಹೆಸರಿನಲ್ಲಿ ಯಾವುದೇ ಆಸ್ತಿಪಾಸ್ತಿ ಇಲ್ಲ.

"2014 ರಲ್ಲಿ ನಾವು ನಡೆಸುವ ಮಹಿಳಾ ಶರಿಯಾ ಅದಾಲತ್ ಗೆ 235 ಪ್ರಕರಣಗಳು ಬಂದಿದ್ದು ಅವುಗಳಲ್ಲಿ 80% ಜನ ಬಾಯಿಮಾತಿನ ತಲಾಕ್ (ವಿಚ್ಚೇಧನ) ಪಡೆದವರು" ಎಂದು ಈ ಅಧ್ಯಯನದ ಲೇಖಕಿ ಜಾಕಿಯಾ ಸೋಮನ್ ತಿಳಿಸಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ ವರದಿ ಮಾಡಿತ್ತು.

ವಿಚ್ಚೇಧನ ಪದ್ಧತಿ ಕಾನೂನಾತ್ಮಕವಾಗಿ ನಡೆಯಬೇಕೆಂದು 93% ಜನ ಅಭಿಪ್ರಾಯ ಪಟ್ಟಿದ್ದಾರೆ, ಮುಸ್ಲಿಂ ವೈಯಕ್ತಿಕ ಕಾನೂನಿನಲ್ಲಿ ತಿದ್ದುಪಡಿ ಅಗತ್ಯ ಎಂದು 83.3% ಜನ ಅಭಿಪ್ರಾಯಪಟ್ಟಿದ್ದಾರೆ. ಆದರೆ ಒಟ್ಟಾಗಿ ಮುಸ್ಲಿಂ ಸಮುದಾಯ ಏಕರೂಪ ನಾಗರಿಕ ಸಂಹಿತೆಗಾಗಲೀ ಅಥವಾ ತಮ್ಮ ಕಾನೂನಿನಲ್ಲಿ ತಿದ್ದುಪಡಿಗಾಗಲಿ ವಿರೋಧ ವ್ಯಕ್ತಪಡಿಸುತ್ತಲೇ ಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com