ನವದೆಹಲಿ: ಯಜಮಾನ ನೀಡುತ್ತಿದ್ದ ಕಿರುಕುಳ ತಾಳಲಾರದೆ ತಪ್ಪಿಸಿಕೊಳ್ಳಲು ಯತ್ನಿಸಿದ ಭಾರತೀಯ ಮೂಲದ ಮಹಿಳೆಯೊಬ್ಬಳ ಕೈಯನ್ನು ಸೌದಿ ಪ್ರಜೆಯೊಬ್ಬ ಕತ್ತರಿಸಿರುವ ಘಟನೆ ರಿಯಾದ್ ನಲ್ಲಿ ಗುರುವಾರ ನಡೆದಿದೆ
ಕಸ್ತೂರಿ ಮುನಿರತ್ನಂ (55) ಎಂಬ ಮಹಿಳೆ ಹಲ್ಲೆಗೊಳಗಾದ ಭಾರತೀಯ ಮೂಲದ ಮಹಿಳೆಯಾಗಿದ್ದು, ಮೂಲತಃ ತಮಿಳುನಾಡಿನವರಾಗಿದ್ದಾರೆ ಎಂದು ತಿಳಿದುಬಂದಿದೆ. ಈಕೆ ರಿಯಾದ್ ನಲ್ಲಿ ಮನೆ ಕೆಲಸ ಮಾಡಿಕೊಂಡಿದ್ದಳು. ಮನೆ ಯಜಮಾನ ಊಟ ನೀಡದೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದ ಎಂದು ಹೇಳಲಾಗುತ್ತಿದೆ. ಹೀಗಾಗಿ ಕಿರುಕುಳ ತಾಳಲಾರದೆ ಕಸ್ತೂರಿ ಅಧಿಕಾರಿಗಳ ಬಳಿ ದೂರು ನೀಡಿದ್ದಳು. ಇದರಿಂದ ಸಿಟ್ಟಿಗೆದ್ದ ಯಜಮಾನ ಆಕೆಯ ಕೈ ಕತ್ತರಿಸಿದ್ದಾನೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಇದೀಗ ಪ್ರಕರಣ ದೇಶಾದ್ಯಂತ ಹಲವು ಟೀಕೆಗಳಿಗೆ ಒಳಗಾಗಿದ್ದು, ಮಹಿಳೆಯ ರಕ್ಷಣೆ ಮಾಡುವಂತೆ ಆಕೆಯ ಕುಟುಂಬದವರು ಭಾರತಕ್ಕೆ ಮನವಿ ಮಾಡಿಕೊಂಡಿದ್ದಾರೆ. ಪ್ರಸ್ತುತ ಕಸ್ತೂರಿ ರಿಯಾದ್ ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಮಹಿಳೆಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಪ್ರಕರಣ ಸಂಬಂಧ ಈಗಾಗಲೇ ಪ್ರತಿಕ್ರಿಯೆ ನೀಡಿರುವ ಸೌದಿಯ ಭಾರತೀಯ ರಾಯಭಾರಿ ಕಚೇರಿ, ತನ್ನ ಮನೆಗೆಲಸದಾಕೆಯ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿರುವ ಸೌದಿ ವ್ಯಕ್ತಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸೌದಿ ಸರ್ಕಾರಕ್ಕೆ ಆಗ್ರಹಿಸಿದೆ.
ಪ್ರಕರಣ ಸಂಬಂಧ ಟ್ವಿಟರ್ ನಲ್ಲಿ ಇಂದು ಪ್ರತಿಕ್ರಿಯೆ ನೀಡಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು, ಭಾರತೀಯ ಮಹಿಳೆಯ ಕೈ ಕತ್ತರಿಸುವ ಘಟನೆಯೊಂದು ಖಂಡನೀಯವಾಗಿದೆ. ಸೌದಿಯಲ್ಲಿ ಭಾರತೀಯ ಮಹಿಳೆಯನ್ನು ನಡೆಸಿಕೊಂಡಿರುವ ರೀತಿ ನಿಜಕ್ಕೂ ಮನಸ್ಸಿಗೆ ಘಾಸಿಯುಂಟು ಮಾಡಿದೆ. ಪ್ರಕರಣವನ್ನು ಸೌದಿ ಅಧಿಕಾರಿಗಳ ಮುಂದೆ ಇಡಲಾಗುತ್ತದೆ ಎಂದು ಹೇಳಿದ್ದಾರೆ.
Chopping of hand of Indian lady - We are very much disturbed over the brutal manner in which Indian lady has been treated in Saudi Arabia.
— Sushma Swaraj (@SushmaSwaraj) October 9, 2015
Advertisement