ದಾದ್ರಿ ಹತ್ಯೆ ಪ್ರಕರಣ: ಅಖ್ಲಾಕ್ ಮನೆಯಲ್ಲಿದ್ದದ್ದು ಗೋಮಾಂಸ ಅಲ್ಲ, ಕುರಿ ಮಾಂಸ

ಗೋಮಾ ಮಾಂಸ ಸಂಗ್ರಹಿಸಿ ಆರೋಪದ ಮೇಲೆ ದಾದ್ರಿಯ ಮುಸ್ಲಿಂ ವ್ಯಕ್ತಿ ಮೊಹಮ್ಮದ್ ಅಖ್ಲಾಕ್‌ನನ್ನು ಗುಂಪೊಂದು ಹತ್ಯೆ ಮಾಡಿತ್ತು. ಆದರೆ ಅಖ್ಲಾಕ್ ಮನೆಯಲ್ಲಿದ್ದಿದ್ದು...
ಮೊಹಮ್ಮದ್ ಅಖ್ಲಾಕ್ ನ ಸಾವಿನ ದುಃಖದಲ್ಲಿರುವ ಕುಟುಂಬಸ್ಥರು
ಮೊಹಮ್ಮದ್ ಅಖ್ಲಾಕ್ ನ ಸಾವಿನ ದುಃಖದಲ್ಲಿರುವ ಕುಟುಂಬಸ್ಥರು

ದಾದ್ರಿ: ಗೋಮಾ ಮಾಂಸ ಸಂಗ್ರಹಿಸಿದ ಆರೋಪದ ಮೇಲೆ ದಾದ್ರಿಯ ಮುಸ್ಲಿಂ ವ್ಯಕ್ತಿ ಮೊಹಮ್ಮದ್ ಅಖ್ಲಾಕ್‌ನನ್ನು ಗುಂಪೊಂದು ಹತ್ಯೆ ಮಾಡಿತ್ತು. ಆದರೆ ಅಖ್ಲಾಕ್ ಮನೆಯಲ್ಲಿದ್ದಿದ್ದು ಗೋಮಾಂಸ ಅಲ್ಲ, ಕುರಿ ಮಾಂಸ ಎಂಬ ಸತ್ಯ ಇದೀಗ ಹೊರ ಬಿದ್ದಿದೆ.

ಅಖ್ಲಾಕ್ ಮನೆಯಲ್ಲಿದ್ದ ಮಾಂಸವನ್ನು ವಿಧಿ ವಿಜ್ಞಾನ ಪರೀಕ್ಷೆಗೆ ಒಳಪಡಿಸಲಾಗಿದ್ದು, ಪರೀಕ್ಷಾ ವರದಿ ಅಖ್ಲಾಕ್ ಕುಟುಂಬದ ಬೆಂಬಲಕ್ಕೆ ನಿಂತಿದೆ. ಅಖ್ಲಾಕ್ ಕುಟುಂಬ ಅದು ಗೋಮಾಂಸ ಅಲ್ಲ ಕುರಿ ಮಾಂಸ ಎಂದು ಹೇಳಿದ್ದರು.

ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ಸೆಪ್ಪೆಂಬರ್ 28ರಂದೇ ಅಖ್ಲಾಕ್ ಮನೆಯಲ್ಲಿದ್ದ ಮಾಂಸದ ಸ್ಯಾಂಪಲ್ ಅನ್ನು ಪರೀಕ್ಷೆಗಾಗಿ ಪಶು ವೈದ್ಯರ ಬಳಿ ತೆಗೆದುಕೊಂಡು ಹೋಗಲಾಗಿತ್ತು. ಈ ಪರೀಕ್ಷೆಯಲ್ಲೂ ಅದು ಗೋಮಾಂಸ ಅಲ್ಲ ಎಂಬುದು ಸಾಬೀತಾಗಿತ್ತು. ಬಳಿಕ ಮತ್ತೊಮ್ಮೆ ಖಚಿತಪಡಿಸಿಕೊಳ್ಳುವುದಕ್ಕಾಗಿ ಪೊಲೀಸರು ಮಾಂಸದ ಸ್ಯಾಂಪಲ್ ಅನ್ನು ಮಥುರಾದ ವಿಧಿ ವಿಜ್ಞಾನದ ಪ್ರಯೋಗಾಲಯಕ್ಕೆ ಕಳುಹಿಸಿದ್ದರು. ಇದೀಗ ಆ ಪ್ರಯೋಗಾಲಯದ ವರದಿಯೂ ಬಂದಿದ್ದು, ಅಲ್ಲೂ ಗೋಮಾಂಸ ಅಲ್ಲ, ಕುರಿ ಮಾಂಸ ಎಂದು ಹೇಳಲಾಗಿದೆ.

ಗೋಮಾಂಸ ಸಂಗ್ರಹಿಸಿದ ಶಂಕೆಯಿಂದಾಗಿ ಮುಸ್ಲಿಂ ವ್ಯಕ್ತಿಯೊಬ್ಬನನ್ನು ಹತ್ಯೆ ಮಾಡಿದ ಪ್ರಕರಣವಿದೀಗ ದೇಶದಾದ್ಯಂತ ಹಲವು ವಿವಾದಗಳನ್ನು ಸೃಷ್ಟಿಸುತ್ತಿದೆ. ಆದರೆ ಕಳೆದ ಐದು ದಶಕಗಳಿಂದ ಶಾತಿಯುತ ಜೀವನ ಮಾಡುತ್ತಿದ್ದ ಅಖ್ಲಾಕ್ ಆಧಾರ ರಹಿತ ವದಂತಿಗೆ ಬಲಿಯಾಗಿರುವುದು ಮಾತ್ರ ದುರದೃಷ್ಟಕರ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com