ನೇತಾಜಿ ಕುರಿತ ದಾಖಲೆ ಬಿಡುಗಡೆ ಜನವರಿಯಲ್ಲಿ: ಪ್ರಧಾನಿ ಮೋದಿ

ಮುಂದಿನ ವರ್ಷ ಜನವರಿ 23ರಿಂದ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರಿಗೆ ಸಂಬಂಧಿಸಿದ ರಹಸ್ಯ ದಾಖಲೆಗಳನ್ನು ಬಿಡುಗಡೆಗೊಳಿಸುವ ಪ್ರತ್ರಿಯೆಯನ್ನು ಕೇಂದ್ರ ಸರ್ಕಾರ ಆರಂಭಿಸಲಿದೆ...
ನೇತಾಜಿ ಕುಟುಂಬದವರೊಂದಿಗೆ ಪ್ರಧಾನಿ ಮೋದಿ ಮತ್ತು ಅವರ ಸಂಪುಟದ ಇಬ್ಬರು ಸಚಿವರು
ನೇತಾಜಿ ಕುಟುಂಬದವರೊಂದಿಗೆ ಪ್ರಧಾನಿ ಮೋದಿ ಮತ್ತು ಅವರ ಸಂಪುಟದ ಇಬ್ಬರು ಸಚಿವರು

ನವದೆಹಲಿ: ಮುಂದಿನ ವರ್ಷ ಜನವರಿ 23ರಿಂದ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರಿಗೆ ಸಂಬಂಧಿಸಿದ ರಹಸ್ಯ ದಾಖಲೆಗಳನ್ನು ಬಿಡುಗಡೆಗೊಳಿಸುವ ಪ್ರತ್ರಿಯೆಯನ್ನು ಕೇಂದ್ರ ಸರ್ಕಾರ ಆರಂಭಿಸಲಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಬುಧವಾರ ಘೋಷಿಸಿದ್ದಾರೆ.

ಅವರು ಇಂದು ದೆಹಲಿಯ 7 ರೇಸ್ ಕೋರ್ಸ್ ರಸ್ತೆಯಲ್ಲಿರುವ ತಮ್ಮ ಅಧಿಕೃತ ನಿವಾಸದಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಕುಟುಂಬದ 35 ಸದಸ್ಯರನ್ನು ಭೇಟಿ ಮಾಡಿ ಆತಿಥ್ಯ ನೀಡಿದ್ದರು. ಅವರೊಂದಿಗೆ ಸುಮಾರು ಒಂದು ಗಂಟೆಗಳ ಕಾಲ ಸಂವಾದ ನಡೆಸಿದರು.

ಕಾರ್ಯಕ್ರಮ ಮುಗಿದ ಬಳಿಕ ಟ್ವೀಟ್ ಮಾಡಿರುವ ಪ್ರಧಾನಿ, ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 118ನೇ ಜಯಂತಿ ದಿನವಾದ ಜನವರಿ 23ರಂದು ದಾಖಲೆಗಳನ್ನು ಬಹಿರಂಗಪಡಿಸುವ ಪ್ರಕ್ರಿಯೆ ಪ್ರಾರಂಭವಾಗಲಿದೆ. 70 ವರ್ಷಗಳ  ಹಿಂದೆ 1945ರಲ್ಲಿ ನೇತಾಜಿಯವರು ಇದ್ದಕ್ಕಿದ್ದಂತೆ ಕಣ್ಮರೆಯಾಗಿದ್ದು ಇಂದಿಗೂ ರಹಸ್ಯವಾಗಿಯೇ ಉಳಿದಿದೆ.ಅವರ ಕುರಿತ ಮಾಹಿತಿಗಳನ್ನು ಬಿಡುಗಡೆ ಮಾಡದಿದ್ದರೆ ಇತಿಹಾಸವನ್ನು ಸರಿಯಾಗಿ ಬರೆಯಲು ಸಾಧ್ಯವಿಲ್ಲ ಎಂದು ಪ್ರಧಾನಮಂತ್ರಿ ಅವರ ಕುಟುಂಬ ಸದಸ್ಯರಿಗೆ ಹೇಳಿದ್ದಾರೆ.

ಕೇಂದ್ರ ಸರ್ಕಾರ ದಾಖಲೆಗಳನ್ನು ಬಹಿರಂಗಪಡಿಸಿದ ನಂತರ ವಿದೇಶಿ ಸರ್ಕಾರಗಳ ಬಳಿ ಸಹ ನೇತಾಜಿಯವರ ಕುರಿತ ಮಾಹಿತಿಗಳನ್ನು ಬಿಡುಗಡೆ ಮಾಡುವಂತೆ ಕೋರಲಿದೆ. ಡಿಸೆಂಬರ್ ತಿಂಗಳಲ್ಲಿ ರಷ್ಯಾ ದೇಶಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ಅಲ್ಲಿನ ಸರ್ಕಾರವನ್ನು ಕೂಡ ದಾಖಲೆಗಳನ್ನು ಬಿಡುಗಡೆ ಮಾಡುವಂತೆ ಕೋರುವುದಾಗಿ ಪ್ರಧಾನಿ ತಿಳಿಸಿದ್ದಾರೆ.

ನೇತಾಜಿಯವರ ದಾಖಲೆಗಳನ್ನು ಬಹಿರಂಗಪಡಿಸುವ ಕಾರ್ಯದಲ್ಲಿ ಗೃಹ ಸಚಿವಾಲಯ ಈಗಾಗಲೇ ಕಾರ್ಯೋನ್ಮುಖವಾಗಿದೆ. ಜನವರಿ 23ರಂದು ದಾಖಲೆಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡುತ್ತೇವೆ ಎಂದು ಪ್ರಧಾನಮಂತ್ರಿ ತಿಳಿಸಿದ್ದಾರೆ.

ಪ್ರಧಾನಿಯವರೊಂದಿಗೆ ಮಾತುಕತೆ ಮುಗಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ನೇತಾಜಿಯವರ ಸೋದರಳಿಯ ಚಂದ್ರ ಕುಮಾರ್ ಬೋಸ್, ಈ ದೇಶ ಕಂಡ ಮಹಾನ್ ನಾಯಕನಿಗೆ ಸಂಬಂಧಪಟ್ಟ ಎಲ್ಲಾ ದಾಖಲೆಗಳನ್ನು ಇದುವರೆಗೆ ಎಲ್ಲಾ ಸರ್ಕಾರಗಳು ಮುಚ್ಚಿಡುತ್ತಾ ಬಂದಿವೆ. ಅವರ ದಾಖಲೆಗಳನ್ನು ಬಿಡುಗಡೆ ಮಾಡಬೇಕೆನ್ನುವುದು ಈ ದೇಶದ ಪ್ರಜೆಗಳ ಒತ್ತಾಯವಾಗಿದೆ ಎಂದರು.

ನೇತಾಜಿಯವರು ರಷ್ಯಾ, ಜಪಾನ್, ಚೀನಾ, ಅಮೆರಿಕಾ, ಇಂಗ್ಲೆಂಡ್, ಸಿಂಗಾಪುರ ಮತ್ತು ಮಲೇಷ್ಯಾ ದೇಶಗಳಲ್ಲಿ ವಾಸವಾಗಿದ್ದರಿಂದ ಈ ಎಲ್ಲಾ ದೇಶಗಳ ಮುಖ್ಯಸ್ಥರಿಗೆ ಪ್ರಧಾನಿ ನರೇಂದ್ರ ಮೋದಿಯವರು ಪತ್ರ ಬರೆದು ರಹಸ್ಯ ದಾಖಲೆಗಳನ್ನು ಬಿಡುಗಡೆ ಮಾಡುವಂತೆ ಪತ್ರ ಬರೆಯಬೇಕೆಂದು ಹೇಳಿದರು. ಇದಕ್ಕೆ ಪ್ರಧಾನಿ ಕೂಡ ಒಪ್ಪಿಗೆ ಸೂಚಿಸಿದ್ದಾರೆ.
ಪಶ್ಚಿಮ ಬಂಗಾಳ ಸರ್ಕಾರ ಇತ್ತೀಚೆಗೆ ನೇತಾಜಿಯವರಿಗೆ ಸಂಬಂಧಪಟ್ಟ 64 ದಾಖಲೆಗಳನ್ನು ಬಿಡುಗಡೆ ಮಾಡಿತ್ತು.  

ಪ್ರಧಾನಿ ನರೇಂದ್ರ ಮೋದಿಯವರು ಕಳೆದ ತಿಂಗಳು ತಮ್ಮ ಮನ್ ಕಿ ಬಾತ್ ರೇಡಿಯೋ ಕಾರ್ಯಕ್ರಮದಲ್ಲಿ ನೇತಾಜಿ ಕುಟುಂಬದ ಸದಸ್ಯರನ್ನು ಭೇಟಿ ಮಾಡುವುದಾಗಿ ತಿಳಿಸಿದ್ದರು. ಇಂದಿನ ಭೇಟಿಯು ಅವಿಸ್ಮರಣೀಯ ಸಂದರ್ಭ ಎಂದು ಮೋದಿ ಬಣ್ಣಿಸಿದ್ದಾರೆ.ಪ್ರಧಾನಿ ನಿವಾಸದಲ್ಲಿ ಇಷ್ಟೊಂದು ಮಂದಿ ನೇತಾಜಿಯವರ ಕುಟುಂಬ ಸದಸ್ಯರನ್ನು ನೋಡಿರುವುದು, ಅವರೊಂದಿಗೆ ಮಾತುಕತೆ ನಡೆಸಿರುವುದು ಖುಷಿ ತಂದಿದೆ ಎಂದಿದ್ದಾರೆ.

ಈ ಸಂದರ್ಭದಲ್ಲಿ ಗೃಹ ಸಚಿವ ರಾಜನಾಥ್ ಸಿಂಗ್, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಉಪಸ್ಥಿತರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com