

ನವದೆಹಲಿ: ಬ್ಯಾಂಕ್ ಆಫ್ ಬರೋಡಾದ ನಂತರ ಇದೀಗ ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಸುಮಾರು 500 ಕೋಟಿ ರೂಪಾಯಿ ಕಪ್ಪು ಹಣವನ್ನು ವರ್ಗಾಯಿಸಿರುವುದನ್ನು ಜಾರಿ ನಿರ್ದೇಶನಾಲಯ ಪತ್ತೆಹಚ್ಚಿದೆ.
ಮಾಧ್ಯಮಗಳಿಗೆ ಸಿಕ್ಕಿರುವ ಮಾಹಿತಿ ಪ್ರಕಾರ, ಓರಿಯಂಟಲ್ ಬ್ಯಾಂಕ್ ಹಾಂಕಾಂಗ್ ಗೆ ತನ್ನ ಖಾತೆ ಮೂಲಕ 500 ಕೋಟಿ ರೂಪಾಯಿಗಳನ್ನು ವರ್ಗಾಯಿಸಿದೆ. ಈ ಸಂಬಂಧ ಇಬ್ಬರನ್ನು ಬಂಧಿಸಲಾಗಿದ್ದು, ಹೆಚ್ಚಿನ ವಿವರಗಳು ಲಭ್ಯವಾಗಿಲ್ಲ.
ವಿದೇಶಕ್ಕೆ ಕಪ್ಪು ಹಣ ವರ್ಗಾಯಿಸಿರುವ ಸಂಬಂಧ ಬ್ಯಾಂಕ್ ಆಫ್ ಬರೋಡಾ ಇತ್ತೀಚೆಗೆ ಸಿಕ್ಕಿಬಿದ್ದು, ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ತನಿಖೆ ಆರಂಭಿಸಿದೆ. ಹಾಂಕಾಂಗ್ ಗೆ 6 ಸಾವಿರದ 172 ಕೋಟಿ ರೂಪಾಯಿ ಹಣವನ್ನು ಅಕ್ರಮವಾಗಿ ವರ್ಗಾಯಿಸಲಾಗಿತ್ತು. ಅಲ್ಲಿಂದ ಗೋಡಂಬಿ, ಧಾನ್ಯಗಳು ಮತ್ತು ಅಕ್ಕಿಯನ್ನು ಅಕ್ರಮವಾಗಿ ತರಿಸಿಕೊಂಡು ಲೆಕ್ಕ ಕೊಡುತ್ತಿರಲಿಲ್ಲ. ದೆಹಲಿಯ ಅಶೋಕ್ ವಿಹಾರ್ ಶಾಖೆಯಲ್ಲಿರುವ ಬ್ಯಾಂಕ್ ಆಫ್ ಬರೋಡಾದ 59 ಖಾತೆಗಳಲ್ಲಿ ಹಣವನ್ನು ಠೇವಣಿ ಇಟ್ಟು ಹಾಂಕಾಂಕ್ ನಲ್ಲಿರುವ ಕೆಲವು ಆಯ್ದ ಕಂಪೆನಿಗಳಿಗೆ ಕಳುಹಿಸಲಾಗುತ್ತಿತ್ತು.