ಬೆಂಗಳೂರು: ಮುಂದಿನ ವರ್ಷದ ಫೆಬ್ರವರಿ 3ರಿಂದ 5ರವರೆಗೆ ನಡೆಯುವ `ಇನ್ವೆಸ್ಟ್ ಕರ್ನಾಟಕ' ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶಕ್ಕೆ ರಾಜ್ಯ ಸರ್ಕಾರ ಅಧಿಕೃತ ಮುನ್ನುಡಿ ಬರೆದಿದೆ. ಇಲ್ಲಿನ ಅಶೋಕ ಹೊಟೇಲ್‍ನಲ್ಲಿ ನಡೆದ ಸಮಾರಂಭದಲ್ಲಿ ಸಮಾವೇಶದ ಲಾಂಛನ ಮತ್ತು ಅಧಿಕೃತ ವೆಬ್‍ತಾಣ ಅನಾವರಣಗೊಂಡಿತು.
ಲಾಂಛನ ಬಿಡುಗಡೆ ಮಾಡಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಂಡವಾಳ ಹೂಡಿಕೆಗೆ ಕರ್ನಾಟಕವೇ ಸೂಕ್ತ ಸ್ಥಳ. ಯಾವುದೇ ರೂಪದಲ್ಲಿ ಯಾವುದೇ ಮೊತ್ತದ ಬಂಡವಾಳ ಹೂಡಿಕೆಗೂ ನಮ್ಮ ರಾಜ್ಯ ಅವಕಾಶ ಮಾಡಿಕೊಡುತ್ತದೆ. ಈ ಮೂಲಕ ರಾಜ್ಯದ ಪ್ರತಿಯೊಬ್ಬರ ಅಭಿವೃದ್ಧಿಗೆ ಜಾಗತಿಕ ಹೂಡಿಕೆದಾರರ ಸಮಾವೇಶ ಅವಕಾಶ ಮಾಡಿಕೊಡ ಬೇಕೆಂಬುದು ಸರ್ಕಾರದ ಆಶಯ ಎಂದರು.
ಇತ್ತೀಚಿನ ದಿನಗಳಲ್ಲಿ ಮೇಕ್ ಇನ್ ಇಂಡಿಯಾ ಪದ ಹೆಚ್ಚು ಪ್ರಚಲಿತದಲ್ಲಿದೆ. ವಾಸ್ತವವಾಗಿ ಕರ್ನಾಟಕವೂ ಮೇಕ್ ಇನ್ ಇಂಡಿಯಾ ಕಲ್ಪನೆಗೆ ಪೂರಕವಾಗಿ ಅನೇಕ ಕಾಯ್ದೆಗಳನ್ನು ಜಾರಿಗೆ ತಂದಿದೆ. ಕೈಗಾರಿಕೆಗಳ ಅಭಿವೃದ್ಧಿಗೆ ಅಗತ್ಯ ಮೂಲ ಸೌಕರ್ಯ ಕಲ್ಪಿಸುವ ಮೂಲಕ ಮೇಕ್ ಇನ್ ಕರ್ನಾಟಕಕ್ಕೆ ಒತ್ತು ನೀಡಿದೆ ಎಂದು ತಿಳಿಸಿದರು. ಕಳೆದ ಎರಡು ವರ್ಷಗಳಲ್ಲಿ ರಾಜ್ಯ ಸರ್ಕಾರವು 450 ಉದ್ಯಮಗಳ ಆರಂಭಕ್ಕೆ ಅನುಮೋದನೆ ನೀಡಿದೆ. ಇದರಿಂದ 1.21 ಲಕ್ಷ ಕೋಟಿ ಬಂಡವಾಳ ಹೂಡಿಕೆಯಾಗುತ್ತಿದ್ದು, 2.44 ಲಕ್ಷ ಉದ್ಯೋಗ ಸೃಷ್ಟಿಯಾಗುತ್ತಿದೆ.
ಈ ಬೆಳವಣಿಗೆ ಇನ್ನಷ್ಟು ಹೆಚ್ಚಬೇಕೆಂಬುದು ಸರ್ಕಾರದ ಆಶಯ. ಕಳೆದ ವರ್ಷ ಜಾರಿಗೆ ತಂದ ನೂತನ ಕೈಗಾರಿಕಾ ನೀತಿಯಿಂದಾಗಿ ಕೈಗಾರಿಕಾ ಕ್ಷೇತ್ರದಲ್ಲಿ ಮುಂದಿನ ಐದು ವರ್ಷಗಳಲ್ಲಿ ಶೇ.12 ಅಭಿವೃದ್ಧಿ ಕಾಣಬೇಕು, 5 ಲಕ್ಷ ಕೋಟಿ ಬಂಡವಾಳ ಹೂಡಿಕೆಯಾಗಬೇಕು ಮತ್ತು 15 ಲಕ್ಷ ಮಂದಿಗೆ ಉದ್ಯೋಗ ಸಿಗಬೇಕೆಂದು ನಿರೀಕ್ಷಿಸಲಾಗಿದೆ ಎಂದು ಹೇಳಿದರು. ಸರ್ಕಾರವು ಕೈಗಾರಿಕೆಗಳ ಪ್ರೋತ್ಸಾಹಕ್ಕೆ ವಿಶೇಷ ಒತ್ತು ನೀಡುತ್ತಿದೆ.
ರಾಜ್ಯದಲ್ಲಿ ಈಗಿರುವ 152 ಕೈಗಾರಿಕಾ ಪ್ರಾಂಗಣಗಳ ಜೊತೆಗೆ ಇನ್ನಷ್ಟು ಕೈಗಾರಿಕಾ ಪ್ರಾಂಗಣಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ, ವಿಶೇಷ ಆರ್ಥಿಕ ವಲಯಗಳನ್ನು ಸ್ಥಾಪಿಸಲಾಗುತ್ತಿದೆ. ಪ್ರಮುಖವಾಗಿ ಹಿಂದುಳಿದ ಪ್ರದೇಶ, ಒಳನಾಡು ಪ್ರದೇಶಗಳಲ್ಲಿ ಕೈಗಾರಿಕಾ ಪ್ರಾಂಗಣ ನಿರ್ಮಿಸಲು ಆಸಕ್ತಿ ವಹಿಸಿದೆ ಎಂದರು. ದಾಬೋಲ್ ಬೆಂಗಳೂರು ಗ್ಯಾಸ್ ಪೈಪ್‍ಲೈನ್ ಯೋಜನೆಯಿಂದ ಕರ್ನಾಟಕ ದ ಕೈಗಾರಿಕಾ ಕ್ಷೇತ್ರಕ್ಕೆ ಉತ್ತೇಜನ ಸಿಕ್ಕಂತಾಗುತ್ತದೆ.
ಇದು ಕಡಿಮೆ ವೆಚ್ಚದಲ್ಲಿ ಮತ್ತು ಪರಿಸರ ಸ್ನೇಹಿ ಕೈಗಾರಿಕೆಗೂ ಒತ್ತು ಸಿಕ್ಕಂತಾಗುತ್ತದೆ ಎಂದ ಅವರು, ಕರ್ನಾಟಕದ ವಿದ್ಯುತ್ ಸಮಸ್ಯೆ ತಾತ್ಕಾಲಿ ಕವಾಗಿದ್ದು, ಈ ಬಗ್ಗೆ ಆತಂಕ ಬೇಡ. 2022ರೊಳಗೆ 22ಗಿಗಾ ವ್ಯಾಟ್ ವಿದ್ಯುತ್ ಉತ್ಪಾದನೆಗೆ ಯೋಜನೆ ರೂಪಿಸಿದೆ. ಇದರಲ್ಲಿ 14.5 ಗಿಗಾ ವ್ಯಾಟ್ ನವೀಕರಿಸಲಾಗದ ಇಂಧನ ಮೂಲದಿಂದಲೂ, 7.5 ಗಿಗಾ ವ್ಯಾಟ್ ನವೀಕರಿಸಬಹುದಾದ ಇಂಧನ ಮೂಲಗಳಿಂದ ಉತ್ಪತ್ಪಿ ಮಾಡುವ ಗುರಿ ಹಾಕಿಕೊಳ್ಳಲಾಗಿದೆ ಎಂದು ತಿಳಿಸಿದರು.
ಕೈಗಾರಿಕೆಗಳ ಬೆಳವಣಿಗೆಗಿನ ಅಡೆತಡೆಗಳನ್ನು ತೊಡೆದುಹಾಕಿ ಬಂಡವಾಳ ಹೂಡಿಕೆಗೆ ರೆಡ್ ಕಾರ್ಪೆಟ್ ಹಾಸುವುದು ನಮ್ಮ ಆಶಯ. ಹೀಗಾಗಿಯೇ ಕೈಗಾರಿಕೆ ಉದ್ಯಮ ಕ್ಷೇತ್ರ ಅಪೇಕ್ಷಿಸುವಂತ ಕ್ರಮಗಳನ್ನು ಸರ್ಕಾರ ಕೈಗೊಳ್ಳುತ್ತಿದೆ. ಕೌಶಲ್ಯ ಪೂರಿತ ಮಾನವ ಸಂಪನ್ಮೂಲ ಸೃಷ್ಟಿಗೆ ವಿಶೇಷ ಪ್ರಯತ್ನ ಮಾಡಲಾಗುತ್ತಿದ್ದು, ಅನೇಕ ಖಾಸಗಿ ಕಂಪನಿಗಳು ನಮ್ಮ ಪ್ರಯತ್ನಕ್ಕೆ ಕೈಜೋಡಿಸಿವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕೈಗಾರಿಕೆ ಮತ್ತು ಪ್ರವಾಸೋದ್ಯಮ ಸಚಿವ ಆರ್.ವಿ.ದೇಶಪಾಂಡೆ ಮಾತನಾಡಿ, ಭವಿಷ್ಯದ ಭಾರತ ಕರ್ನಾಟಕ ಎಂಬಂತಾಗಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಪ್ರಯತ್ನ ನಡೆಸುತ್ತಿದೆ. ಹೊಸ ಉದ್ಯಮಗಳ ಆರಂಭಕ್ಕೆ ಕರ್ನಾಟಕವೇ ರಾಜಧಾನಿಯಾಗಬೇಕೆಂಬ ನಿಟ್ಟಿ ನಲ್ಲಿಯೂ ವಿಶೇಷ ಪ್ರಯತ್ನ ನಡೆಸಿರುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಸಚಿವರಾದ ಎಸ್.ಆರ್.ಪಾಟೀಲ್, ಯು.ಟಿ. ಖಾದರ್, ರಮಾನಾಥ ರೈ, ಸತೀಶ್ ಜಾರಕಿಹೊಳಿ ಉಪಸ್ಥಿತರಿದ್ದರು. ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ, ಕೈಗಾರಿಕಾ ಇಲಾಖೆ ಆಯುಕ್ತ ಗೌರವ್ ಗುಪ್ತಾ ಅವರು ಸಮಾವೇಶದ ಕುರಿತು ಮಾಹಿತಿ ನೀಡಿದರು.