
ಆಗ್ರ: ಇಷ್ಟು ದಿನ ರಾಜಕೀಯ ನಾಯಕರ ಕೆಸರೆರಚಾಟಕ್ಕೆ ಕಾರಣವಾಗಿದ್ದ ದಾದ್ರಿ ಪ್ರಕರಣ ಇದೀಗ ಉಗ್ರರ ಗಾಳವಾಗಿ ಬದಲಾಗಲಿದೆಯೇ...ಹೀಗೊಂದು ಅನುಮಾನ ಇದೀಗ ಎಲ್ಲರಲ್ಲೂ ಹುಟ್ಟುವಂತೆ ಮಾಡಿದೆ.
ಗೋಮಾಂಸ ಸೇವನೆ ಶಂಕೆಯಿಂದಾಗಿ ಮುಸ್ಲಿಂ ವ್ಯಕ್ತಿಯನ್ನು ಹತ್ಯೆ ಮಾಡಿದ ಪ್ರಕರಣ ಇಡೀ ದೇಶದಾದ್ಯಂತ ಸುದ್ದಿ ಮಾಡಿತ್ತು. ಈ ಪ್ರಕರಣ ರಾಜಕೀಯ ವಲಯದಲ್ಲಿ ಸಾಕಷ್ಟು ವಿವಾದವನ್ನೇ ಸೃಷ್ಟಿ ಮಾಡಿತ್ತು. ಇದೀಗ ಇದೇ ಪ್ರಕರಣವನ್ನು ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳಲು ಉಗ್ರ ಸಂಘಟನೆಗಳು ಯತ್ನ ನಡೆಸುತ್ತಿದ್ದು, ದಾದ್ರಿಯಲ್ಲಿ ಬಾಂಬ್ ಸ್ಪೋಟ ನಡೆಸಲು ಉಗ್ರರು ಸಂಚು ರೂಪಿಸುತ್ತಿದ್ದಾರೆಂಬ ಮಾಹಿತಿಯನ್ನು ಕೇಂದ್ರ ಗುಪ್ತಚರ ಇಲಾಖೆಯು ಗುರುವಾರ ಮಾಹಿತಿ ನೀಡಿದೆ.
ಭಾರತದಲ್ಲಿ ಭಯೋತ್ಪಾದನಾ ಚಟುವಟಿಕೆ ನಡೆಸಲು ಈ ಹಿಂದಿನಿಂದಲೂ ಉಗ್ರರ ಸಂಘಟನೆಗಳು ಸಂಚು ರೂಪಿಸುತ್ತಿದ್ದು, ಇದೀಗ ದಾದ್ರಿ ಪ್ರಕರಣವನ್ನೇ ತಮ್ಮ ಗಾಳವಾಗಿಸಿಕೊಳ್ಳಲು ಉಗ್ರ ಸಂಘಟನೆಯೊಂದು ಯತ್ನ ನಡೆಸಿದೆ. ದಾದ್ರಿಯಲ್ಲಿ ಬೇರೂರಲು ಯತ್ನ ನಡೆಸಿರುವ ಉಗ್ರರು ದಾದ್ರಿ ಸೇರಿದಂತೆ ಮಣಿಪುರದಾದ್ಯಂತ ಬಾಂಬ್ ಸ್ಪೋಟ ನಡೆಸಲು ಸಂಚು ರೂಪಿಸಿದೆ ಎಂದು ಗುಪ್ತಚರ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದೆ ಎಂದು ತಿಳಿದುಬಂದಿದೆ.
ಗುಪ್ತಚರ ಇಲಾಖೆ ಮಾಹಿತಿಯನ್ವಯ ಇದೀಗ ಎಚ್ಚೆತ್ತುಕೊಂಡಿರುವ ಅಧಿಕಾರಿಗಳು ದಾದ್ರಿ, ಮಣಿಪುರ ಸೇರಿದಂತೆ ಇನ್ನಿತರೆ ಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತೆಯನ್ನು ಒದಗಿಸಿದ್ದು, ತೀವ್ರ ಕಟ್ಟೆಚ್ಚರ ವಹಿಸಿದೆ ಎಂದು ಹೇಳಲಾಗುತ್ತಿದೆ.
ಈ ಕುರಿತಂತೆ ಮಾತನಾಡಿರುವ ಹಿರಿಯ ಪೊಲೀಸ್ ಅಧಿಕಾರಿ ಗೋಪೇಶ್ ನಾಥ್ ಖನ್ನಾ ಅವರು, ಜುಲೈನಲ್ಲಿ ಗುರುದಾಸ್ ಪುರದಲ್ಲಿ ಸ್ಪೋಟ ನಡೆಸಲು ಉಗ್ರರು ಸಂಚು ರೂಪಿಸಿದ್ದರು. ಆದರೆ, ಈ ಯತ್ನದಲ್ಲಿ ಉಗ್ರರು ವಿಫಲರಾಗಿದ್ದರು. ಇದೀಗ ದಾದ್ರಿ ಪ್ರಕರಣವನ್ನು ತನ್ನ ಗಾಳವಾಗಿಸಿಕೊಳ್ಳಲು ಯತ್ನಿಸುತ್ತಿರುವ ಉಗ್ರರು ಹಬ್ಬ ಹಾಗೂ ಚುನಾವಣೆ ದಿನಗಳಾಗಿರುವ ಈ ಸಂದರ್ಭದಲ್ಲಿ ಸ್ಪೋಟ ನಡೆಸಲು ಸಂಚು ರೂಪಿಸುತ್ತಿದ್ದಾರೆ. ಉಗ್ರರ ದಾಳಿ ಕುರಿತಂತೆ ಈಗಾಗಲೇ ನಮಗೆ ಮಾಹಿತಿ ದೊರಕಿದ್ದು, ತೀವ್ರ ಕಟ್ಟೆಚ್ಚರ ವಹಿಸಲಾಗಿದೆ ಎಂದು ಹೇಳಿದ್ದಾರೆ.
ಗುಪ್ತಚರ ಇಲಾಖೆ ನೀಡಿರುವ ಮಾಹಿತಿಯನ್ನು ಈಗಾಗಲೇ ಎಲ್ಲಾ ಠಾಣೆ ಹಾಗೂ ಅಧಿಕಾರಿಗಳಿಗೆ ರವಾನೆ ಮಾಡಲಾಗಿದೆ. ಮಾಹಿತಿಯನ್ವಯ ಈಗಾಗಲೇ ಇಬ್ಬರು ವ್ಯಕ್ತಿಗಳನ್ನು ಬಂಧನಕ್ಕೊಳಪಡಿಸಲಾಗಿದೆ. ಬಂಧನಕ್ಕೊಳಗಾಗಿರುವ ವ್ಯಕ್ತಿಗಳು ಉಗ್ರರ ಸಂಘಟನೆಗಳಿಗೆ ಸಹಾಯ ಮಾಡುತ್ತಿರುವುದಾಗಿ ತಿಳಿದುಬಂದಿದೆ. ಉಗ್ರರು ತಮ್ಮ ಸ್ಪೋಟಕ್ಕೆ ಇದೀಗ ಕಾಶಿ ವಿಶ್ವನಾಥ ದೇವಸ್ಥಾನ, ಅಯೋಧ್ಯೆ ರಾಮದೇಗುಲಗಳನ್ನು ಗುರಿಯಾಗಿಸಿಕೊಂಡಿದ್ದಾರೆಂಬ ಮಾಹಿತಿ ಇದೀಗ ಲಭ್ಯವಾಗಿದೆ ಎಂದು ಹೇಳಿದ್ದಾರೆ.
ಮೂಲಗಳ ಪ್ರಕಾರ ಬಂಧಿತರಾಗಿರುವ ಇಬ್ಬರು ವ್ಯಕ್ತಿಗಳನ್ನು ಈಗಾಗಲೇ ಅಲಹಾಬಾದ್ ನ ಭದ್ರತಾಧಿಕಾರಿಗಳು ವಿಚಾರಣೆ ನಡೆಸಿದ್ದು, ವಿಚಾರಣೆ ವೇಳೆ ಉಗ್ರರು ಉತ್ತರ ಪ್ರದೇಶದ ವಿಧಾನ ಸಭೆ, ಅಲಹಾಬಾದ್ ನ ಹೈ ಕೋರ್ಟ್, ಕಾನ್ಪುರ ರೈಲ್ವೆ ನಿಲ್ದಾಣ ಹಾಗೂ ಮಾಜಿ ಯೋಧನ ಅಲಹಾಬಾದ್ ನಲ್ಲಿರುವ ಮಾಜಿ ಸೇನಾ ಸಿಬ್ಬಂದಿಗಳ ನಿವಾಸಗಳ ಮೇಲೆ ದಾಳಿ ನಡೆಸಲಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ ಎಂದು ಹೇಳಲಾಗುತ್ತಿದೆ.
Advertisement