ಪಟಾಕಿಗಳಲ್ಲಿ ಹಿಂದೂ ದೇವತೆಗಳ ಚಿತ್ರಗಳಿಗೆ ಇನ್ನು ನಿಷೇಧ
ವಿರುದುನಗರ್: ದೀಪಾವಳಿ ಹಬ್ಬದ ದಿನ ಹತ್ತಿರ ಬರುತ್ತಿದೆ. ದೀಪಾವಳಿ ಎಂದ ಮೇಲೆ ಅಲ್ಲಿ ಪಟಾಕಿ ಇದ್ದೇ ಇರುತ್ತದೆ. ಪಟಾಕಿ ತಯಾರಿಸುವ ತಮಿಳುನಾಡು ರಾಜ್ಯದಲ್ಲಿ ಈ ಬಾರಿ ದೇವತೆಗಳ ಚಿತ್ರಗಳ ಲೇಬಲ್ ಗಳನ್ನು ಪಟಾಕಿ ಮೇಲೆ ಸುತ್ತಲು ಬಳಸಿಕೊಳ್ಳುವಂತಿಲ್ಲ ಎಂದು ವಿರುದುನಗರ್ ಜಿಲ್ಲಾಡಳಿತ ಆದೇಶ ನೀಡಿದೆ.
ದೇವತೆಗಳ ಚಿತ್ರಗಳನ್ನು ಪಟಾಕಿ ಮೇಲೆ ಸುತ್ತಲು ಬಳಸಿಕೊಂಡರೆ ಹಿಂದೂಜನರ ಭಾವನೆಗಳಿಗೆ ನೋವಾಗಬಹುದೆಂದು ಜಿಲ್ಲಾಡಳಿತ ಈ ಕ್ರಮ ತೆಗೆದುಕೊಂಡಿದೆ.ಜಿಲ್ಲಾ ಕಂದಾಯ ಅಧಿಕಾರಿ ತಮಿಳುನಾಡು ಪಟಾಕಿ ಉತ್ಪಾದಕರ ಒಕ್ಕೂಟಕ್ಕೆ ಸುತ್ತೋಲೆ ಕಳುಹಿಸಿ, ದೇವತೆಗಳ ಚಿತ್ರವಿರುವ ಲೇಬಲ್ ಗಳನ್ನು ಅಂಟಿಸಿದಂತೆ ಆದೇಶ ನೀಡಿದ್ದಾರೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾಧಿಕಾರಿ ವಿ.ರಾಜಾರಾಮನ್, ಅಖಿಲ ಭಾರತ ಹಿಂದೂ ಮಹಾಸಭಾದ ರಾಜ್ಯ ಘಟಕ ಮನವಿ ಸಲ್ಲಿಸಿ ಪಟಾಕಿಗಳ ಮೇಲೆ ಹಿಂದೂ ದೇವತೆಗಳ ಚಿತ್ರವಿರುವ ಲೇಬಲ್ ಗಳನ್ನು ಬಳಸದಂತೆ ಕೋರಿದೆ ಎಂದು ಹೇಳಿದ್ದಾರೆ.
ಹಿಂದೂ ದೇವತೆಗಳ ಚಿತ್ರಗಳಿರುವ ಲೇಬಲ್ ಗಳನ್ನು ಅಂಟಿಸಿದರೆ ಪಟಾಕಿಗಳನ್ನು ಮನೆಗೆ ತಂದ ನಂತರ ಅದರ ಕಾಗದ ಚೂರುಗಳನ್ನು ರಸ್ತೆಗೆ ಎಸೆಯುತ್ತಾರೆ. ಅದರ ಮೇಲೆ ಜನ ತುಳಿದುಕೊಂಡು ಹೋಗುತ್ತಾರೆ. ನಂತರ ಕಸವನ್ನು ರಸ್ತೆಗೆ ಎಸೆಯಲಾಗುತ್ತದೆ. ಈ ಮೂಲಕ ಹಿಂದೂ ದೇವತೆಗಳಿಗೆ ಅಪಚಾರ ಎಸಗಿದಂತಾಗುತ್ತದೆ. ಇದರಿಂದ ಹಿಂದೂ ಜನರ ಭಾವನೆಗಳಿಗೂ ಧಕ್ಕೆಯುಂಟಾಗುತ್ತದೆ ಎಂದು ಸಂಘಟನೆಗಳು ಹೇಳಿವೆ.
ಜಿಲ್ಲಾಡಳಿತದ ಆದೇಶದ ಬಗ್ಗೆ ಪ್ರತಿಕ್ರಿಯಿಸಿರುವ ತಮಿಳುನಾಡು ಪಟಾಕಿ ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಜಿ. ಅಬಿರುಬೆನ್ ಸುದ್ದಿಗಾರರೊಂದಿಗೆ ಮಾತನಾಡಿ, ಆದೇಶವನ್ನು ಈ ವರ್ಷದಿಂದ ಕಟ್ಟುನಿಟ್ಟಾಗಿ ಪಾಲಿಸಲಾಗುವುದು ಎಂದು ಹೇಳಿದ್ದಾರೆ.
ಅನೇಕ ಹಿಂದೂ ದೇವತೆಗಳ ಚಿತ್ರದ ಲೇಬಲ್ ಗಳಿರುವ ಪಟಾಕಿಗಳು ಮಾರುಕಟ್ಟೆಯಲ್ಲಿ ಚಾಲ್ತಿಯಲ್ಲಿವೆ. 1924ರಿಂದೀಚೆಗೆ ಹಿಂದೂ ದೇವತೆಗಳ ಚಿತ್ರಗಳಿರುವ ಪಟಾಕಿಗಳು ನಮ್ಮ ದೇಶದಲ್ಲಿ ಚಾಲ್ತಿಯಲ್ಲಿವೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ