
ಫೈಜಾಬಾದ್(ಉತ್ತರ ಪ್ರದೇಶ): ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಮುಖ್ಯ ಕಕ್ಷಿಗಾರ ಹಶೀಮ್ ಅನ್ಸಾರಿ ಅವರು ದೇಶಾದ್ಯಂತ ಗೋ ಮಾಂಸವನ್ನು ನಿಷೇಧಿಸಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಗೋ ಮಾಂಸ ನಿಷೇಧ ಪ್ರಕರಣ ತುಂಬಾ ಸೂಕ್ಷ್ಮವಾಗಿದ್ದು, ಇದರಲ್ಲಿ ರಾಜಕೀಯ ಮಾಡಬಾರದು ಎಂದು ಹೇಳಿದ್ದಾರೆ.ಪತ್ರಿಕೆಯೊಂದಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ, ನರೇಂದ್ರ ಮೋದಿಯವರು ಪ್ರಧಾನಮಂತ್ರಿಯಾಗಿ ಉತ್ತಮ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು 95 ವರ್ಷದ ವೃದ್ಧ ಹಶೀಮ್ ಅನ್ಸಾರಿ ಶ್ಲಾಘಿಸಿದ್ದಾರೆ.
ದೇಶಾದ್ಯಂತ ಶಾಂತಿ, ನೆಮ್ಮದಿ ನೆಲೆಸಬೇಕು. ಈ ನಿಟ್ಟಿನಲ್ಲಿ ಪ್ರಧಾನಿ ಕಟ್ಟುನಿಟ್ಟಾದ ಆಳ್ವಿಕೆ ನಡೆಸಲು ಪ್ರಯತ್ನಿಸುತ್ತಿದ್ದಾರೆ ಎಂದಿದ್ದಾರೆ.ಉತ್ತರ ಪ್ರದೇಶದ ಸಮಾಜವಾದಿ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಅವರ ವಿರುದ್ಧ ವಾಗ್ದಾಳಿ ನಡೆಸಿ, ಅವರು ಎಂದಿಗೂ ತಮ್ಮ ಮಾತಿಗೆ ಬದ್ಧರಾಗಿರುವುದಿಲ್ಲ. ಆದುದರಿಂದ ಮುಸಲ್ಮಾನರು ಅವರ ರಾಜಕೀಯವನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ. ಆದರೆ ಮುಲಾಯಂ ಸಿಂಗ್ ಯಾದವ್ ಅವರಿಗೆ ಈಗ ಯಾವುದೇ ಮಾರ್ಗ ಉಳಿದಿಲ್ಲ. ಅವರು ಮೋದಿಯವರೊಂದಿಗೆ ಕೈ ಜೋಡಿಸಲೇ ಬೇಕು ಎಂದರು.
ಇದೇ ಸಂದರ್ಭದಲ್ಲಿ ಅವರು ಪ್ರಸ್ತುತ ತಮ್ಮ ಹೇಳಿಕೆಯಿಂದ ಸುದ್ದಿಯಲ್ಲಿರುವ ಉತ್ತರ ಪ್ರದೇಶದ ಕ್ರೀಡಾ ಸಚಿವ ಅಝಮ್ ಖಾನ್ ವಿರುದ್ಧವೂ ವಾಗ್ದಾಳಿ ನಡೆಸಿದರು. ಖಾನ್ ಅವರು ವಿಷಪೂರಿತ ಬೀಜ ಬಿತ್ತಿ ಹಿಂದೂ,ಮುಸಲ್ಮಾನರ ನಡುವೆ ಅಂತರ ಹೆಚ್ಚಿಸುತ್ತಿದ್ದಾರೆ ಎಂದರು.
ಅಝಮ್ ಖಾನ್ ಅವರು ಮುಸಲ್ಮಾನರ ಹಿತೈಷಿ ಅಲ್ಲ, ನಿಜ ಹೇಳಬೇಕೆಂದರೆ ಅವರು ಮುಸಲ್ಮಾನರಿಗೆ ಹಾನಿ ಮಾಡುತ್ತಿದ್ದಾರೆ ಎಂದು ಆಕ್ರೋಶದಿಂದ ನುಡಿದರು.
Advertisement