ಬೇಳೆ ಅಕ್ರಮ ದಾಸ್ತಾನು; ಕರ್ನಾಟಕ ಸೇರಿ 5 ರಾಜ್ಯಗಳಲ್ಲಿ ಕೇಂದ್ರ ತಂಡ ದಾಳಿ

ತೊಗರಿಬೇಳೆಯನ್ನು ಕೆಲವು ಅಂಗಡಿ, ಗೋದಾಮುಗಳಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿ ಬೆಲೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ತೊಗರಿಬೇಳೆಯನ್ನು ಕೆಲವು ಅಂಗಡಿ, ಗೋದಾಮುಗಳಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿ ಬೆಲೆ ಏರಿಕೆಯಾದ ಹಿನ್ನೆಲೆಯಲ್ಲಿ ಕರ್ನಾಟಕ, ತೆಲಂಗಾಣ, ಮಹಾರಾಷ್ಟ್ರ ಸೇರಿದಂತೆ 5 ರಾಜ್ಯಗಳಲ್ಲಿ ಕೇಂದ್ರದ ತಂಡ ಏಕಕಾಲದಲ್ಲಿ ದಾಳಿ ನಡೆಸಿ ಸುಮಾರು 5 ಸಾವಿರದ 800 ಟನ್ ಗಳಷ್ಟು ಬೇಳೆಯನ್ನು ವಶಪಡಿಸಿಕೊಂಡಿದೆ.

ದಾಸ್ತಾನುಗಾರರು ತೊಗರಿ ಬೇಳೆಗಳನ್ನು ಅಕ್ರಮವಾಗಿ ಶೇಖರಿಸಿಟ್ಟ ಪರಿಣಾಮ ಬೆಲೆ ಏರಿಕೆಗೆ ಕಾರಣವಾಗಿತ್ತು. ಇದರಿಂದಾಗಿ ತೊಗರಿಬೇಳೆ ಕೇಜಿಗೆ 200 ರೂಪಾಯಿ ತಲುಪಿತ್ತು.

ಈ ಹಿನ್ನೆಲೆಯಲ್ಲಿ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶ ರಾಜ್ಯಗಳಲ್ಲಿ ಕೇಂದ್ರ ಸರ್ಕಾರದ ತಂಡ ಬೇಳೆಕಾಳು ದಾಸ್ತಾನುಗಾರರ ಅಂಗಡಿ ಗೋದಾಮುಗಳ ಮೇಲೆ  ದಾಳಿ ನಡೆಸಿದೆ. ಈ ಸಂದರ್ಭದಲ್ಲಿ ಸುಮಾರು 9 ಸಾವಿರ ಕ್ವಿಂಟಾಲ್ ಬೇಳೆ ಜಪ್ತಿ ಮಾಡಿಕೊಂಡಿರುವುದಾಗಿ ಮೂಲಗಳು ತಿಳಿಸಿವೆ.

ತೊಗರಿಬೆಳೆ ಬೆಲೆ ಏರಿಕೆ ಸಂಬಂಧ ಇಂದು ಗ್ರಾಹಕ ಪೂರೈಕೆ, ಕೃಷಿ, ವಾಣಿಜ್ಯ ಮತ್ತು ಇತರ ಸಚಿವಾಲಯಗಳ ಕಾರ್ಯದರ್ಶಿಗಳ ಮಟ್ಟದ ಸಭೆ ದೆಹಲಿಯಲ್ಲಿಂದು ನಡೆಯಿತು.
ಬೇಳೆಗಳ ಬೆಲೆ ಏರಿಕೆ ಸಂಬಂಧ ರಾಜ್ಯ ಸರ್ಕಾರಗಳು ಏನು ಕ್ರಮ ಕೈಗೊಂಡಿವೆ ಎಂದು ಸಭೆಯಲ್ಲಿ ಪರಿಶೀಲಿಸಲಾಯಿತು. ಅಗತ್ಯ ವಸ್ತುಗಳ ಕಾಯ್ದೆಯನ್ನು ತಕ್ಷಣವೇ ಜಾರಿಗೆ ತರಬೇಕೆಂದು ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಲಾಯಿತು. ಕೆಲವು ರಾಜ್ಯಗಳಲ್ಲಿ ಏಕಕಾಲಕ್ಕೆ ತಕ್ಷಣ ದಾಳಿ ನಡೆಸಲಾಯಿತು. ಇನ್ನೂ ಕೂಡ ಈ ದಾಳಿ ಮುಂದುವರಿಯಲಿದೆ.

ತೆಲಂಗಾಣದಲ್ಲಿ 2 ಸಾವಿರದ 549 ಟನ್, ಮಧ್ಯ ಪ್ರದೇಶದಲ್ಲಿ 2 ಸಾವಿರದ 295 ಟನ್, ಆಂಧ್ರ ಪ್ರದೇಶದಲ್ಲಿ 600 ಟನ್, ಕರ್ನಾಟಕದಲ್ಲಿ 360 ಟನ್ ಹಾಗೂ ಮಹಾರಾಷ್ಟ್ರದಲ್ಲಿ 10 ಕ್ವಿಂಟಾಲ್ ಗಳಷ್ಟು ಬೇಳೆಗಳನ್ನು ವಶಪಡಿಸಿಕೊಳ್ಳಲಾಯಿತು. ಕರ್ನಾಟಕದ ಮೈಸೂರು, ಗುಲ್ಬರ್ಗಾ ಮೊದಲಾದೆಡೆ ದಾಳಿ ಮುಂದುವರಿದಿದೆ ಎಂದು ಕೇಂದ್ರ ಗ್ರಾಹಕ ಪೂರೈಕೆ ಕಾರ್ಯದರ್ಶಿ ಸಿ.ವಿಶ್ವನಾಥ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com