ಆಸ್ಪತ್ರೆ ಸ್ವಚ್ಛ ಮಾಡಲು ಗೋಮೂತ್ರ ಬಳಸಿ: ಮುಂಬೈ ಕಾರ್ಪೊರೇಟರ್

ಗೋಮೂತ್ರದಲ್ಲಿ ರೋಗಾಣುನಾಶಕ ಶಕ್ತಿ ಇದೆ ಆದ್ದರಿಂದ ಆಸ್ಪತ್ರೆ ಸ್ವಚ್ಛ ಮಾಡಲು ಗೋಮೂತ್ರ ಬಳಸಿ ಎಂದು ಮುಂಬೈ ಕಾರ್ಪೊರೇಟರ್...
ಪರ್‌ಮಿಂದರ್ ಭಾಮ್ರಾ (ಕೃಪೆ: ಮಿಡ್ ಡೇ)
ಪರ್‌ಮಿಂದರ್ ಭಾಮ್ರಾ (ಕೃಪೆ: ಮಿಡ್ ಡೇ)
ಮುಂಬೈ: ಗೋಮೂತ್ರದಲ್ಲಿ ರೋಗಾಣುನಾಶಕ ಶಕ್ತಿ ಇದೆ ಆದ್ದರಿಂದ ಆಸ್ಪತ್ರೆ ಸ್ವಚ್ಛ ಮಾಡಲು ಗೋಮೂತ್ರ ಬಳಸಿ ಎಂದು ಮುಂಬೈ ಕಾರ್ಪೊರೇಟರ್ ಪರ್‌ಮಿಂದರ್ ಭಾಮ್ರಾ ಹೇಳಿದ್ದಾರೆ.
ಗೋಮೂತ್ರ ಬಳಕೆ ಹಳೇ ಕಾಲದಿಂದಲೂ ನಡೆದು ಬರುತ್ತಿದೆ. ನನ್ನ ಮನೆ ಶುಚಿಗೊಳಿಸಲು ದಿನಾ ಅದನ್ನೇ ಬಳಸುತ್ತಿದ್ದೇನೆ. ಇದರಲ್ಲಿ ರೋಗಾಣುನಾಶಕ ಶಕ್ತಿ ಇದೆ. ಹತ್ತಿರದ ಗೋಶಾಲೆಯಿಂದ ನಾನು ಗೋಮೂತ್ರ ತೆಗೆದುಕೊಂಡು ಬಂದು ಮನೆ ಶುಚಿಗೊಳಿಸಲು ಬಳಸುತ್ತೇನೆ. ಆಸ್ಪತ್ರೆಗಳನ್ನು ಸ್ವಚ್ಛಗೊಳಿಸಲೂ ಗೋಮೂತ್ರವನ್ನು ಬಳಸಿದರೆ ಒಳ್ಳೆಯದು ಎಂದು ಭಾಮ್ರಾ ಹೇಳಿದ್ದಾರೆ.
ಮಲಾಡ್ ನ ಕಾರ್ಪೋರೇಟರ್ ಆಗಿರುವ ಭಾಮ್ರಾ, ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಗೋಮೂತ್ರ ಬಳಸುವಂತೆ ಆದೇಶಿಸಿ ಎಂದು ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್‌ನಲ್ಲಿ ಮನವಿ ಮಾಡಿದ್ದಾರೆ.
ಆಸ್ಪತ್ರೆಯವರು ಏನಂತಾರೆ?
ಆಸ್ಪತ್ರೆಯಲ್ಲಿ ಶುಚಿಗೊಳಿಸುವುದಕ್ಕೆ ಗೋಮೂತ್ರದ ಬಳಕೆಯ ಬಗ್ಗೆ ಮಾತನಾಡಲು ಆಸ್ಪತ್ರೆಯವರೂ ಹಿಂಜರಿಯುತ್ತಿದ್ದಾರೆ. ಗೋವು ಎಂಬ ವಿಷಯದ ಬಗ್ಗೆಯೇ ಹೆಚ್ಚಿನವರು ಮಾತನಾಡಲು ಹಿಂದೇಟು ಹಾಕುತ್ತಿದ್ದಾರೆ. ಆದಾಗ್ಯೂ, ಪುರಾತನ ಕಾಲದಿಂದಲೇ ಗೋಮೂತ್ರ ಬಳಕೆಯ ಬಗ್ಗೆ ಕೇಳಿದ್ದೇವೆ. ಆಯುರ್ವೇದದಲ್ಲಿಯೂ ಗೋಮೂತ್ರ ಬಳಕೆ ಇದೆ. ಆದರೆ ಅದನ್ನು ಆಸ್ಪತ್ರೆಯಲ್ಲಿ ಬಳಸುತ್ತಾರೆ ಎಂದು ನನಗೆ ಗೊತ್ತಿಲ್ಲ ಎಂದು ಬಿಎಂಸಿ ಆಸ್ಪತ್ರೆಯ ಇನ್‌ಚಾರ್ಜ್ ಡಾ. ಮಹೇಂದ್ರ ವಡಿವಾಲ್ ಹೇಳಿದ್ದಾರೆ.
ಗೋಮೂತ್ರ ಬೇಡ: ತಜ್ಞರ ಸಲಹೆ
ಶುಚಿಗೊಳಿಸುವ ದ್ರಾವಕವಾಗಿ ಗೋಮೂತ್ರವನ್ನು ಬಳಸಲಾಗುವುದಿಲ್ಲ. ಅದರಲ್ಲಿ ರೋಗಾಣುನಾಶಕ ಶಕ್ತಿ ಇದೆ ಎಂದು ಹೇಳುವುದಕ್ಕೆ ವೈಜ್ಞಾನಿಕ ಸಾಕ್ಷ್ಯಾಧಾರಗಳು ಬೇಕು. ಗೋಮೂತ್ರವನ್ನು ಕೃಷಿಗೆ ಬಳಸಲಾಗುತ್ತದೆ ಆದರೆ ಸ್ವಚ್ಛ ಮಾಡುವುದಕ್ಕೆ ಅಲ್ಲ. ನಮ್ಮ ದೇಶದಲ್ಲಿ ಹಲವಾರು ರಾಜಕಾರಣಿಗಳು ಅವಿದ್ಯಾವಂತರು ಎಂಬುದು ದುರದೃಷ್ಟಕರ ಸಂಗತಿ ಎಂದು  ನಾಗ್ಪುರ್ ವೆಟರ್ನಿಟಿ ಕಾಲೇಜಿನ ಮಾಜಿ ನಿರ್ದೇಶಕ ಮತ್ತು ಬಾಂಬೆ ವೆಟರ್ನಿಟಿ ಕಾಲೇಜಿನ ಅಸೋಸಿಯೇಟ್ ಡೀನ್ ಡಾ. ವಿ.ಎಲ್  ಡಿಯೋಪುರ್ಕರ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com