
ನವದೆಹಲಿ: ಬಿಹಾರ ವಿಧಾನಸಭಾ ಚುನಾವಣೆ ನಂತರ ಸಮಾನ ಶ್ರೇಣಿ ಸಮಾನ ಪಿಂಚಣಿ ಯೋಜನೆ ಜಾರಿಯ ಅಧಿಸೂಚನೆಯನ್ನು ಪ್ರಕಟಿಸಲಾಗುವುದು ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
ಈ ದೀಪಾವಳಿ ಹಬ್ಬಕ್ಕೆ ಮೊದಲೇ ಅಧಿಸೂಚನೆ ಪ್ರಕಟಗೊಳ್ಳಲಿದೆ. ಬಿಹಾರ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಅಧಿಸೂಚನೆಯನ್ನು ತರಾತುರಿಯಿಂದ ಹೊರಡಿಸಲಾಗುತ್ತಿದೆ. ಬಿಹಾರ ವಿಧಾನಸಭೆಯ 243 ಸ್ಥಾನಗಳಿಗೆ ನವೆಂಬರ್ 5ರಂದು ಚುನಾವಣೆ ಮುಗಿಯಲಿದ್ದು, ನವೆಂಬರ್ 8ರಂದು ಫಲಿತಾಂಶ ಪ್ರಕಟವಾಗಲಿದೆ.
ಇದೇ ವೇಳೆ ಪ್ರತಿಭಟನಾ ನಿರತ ಮಾಜಿ ಯೋಧರು ರಕ್ತದಲ್ಲಿ ತಮ್ಮ ಸಹಿ ಹಾಕಿದ ಪತ್ರವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಕಳುಹಿಸಿದ್ದು, ಸಮಾನ ಶ್ರೇಣಿ, ಸಮಾನ ಪಿಂಚಣಿ ಯೋಜನೆಯನ್ನು ಶೀಘ್ರವೇ ಜಾರಿಗೆ ತರುವಂತೆ ಒತ್ತಾಯಿಸಿದ್ದಾರೆ.
ಸೆಪ್ಟೆಂಬರ್ 5ರಂದು ಕೇಂದ್ರ ಸರ್ಕಾರ ಘೋಷಣೆ ಮಾಡಿದ್ದ ಯೋಜನೆಯಲ್ಲಿ 7 ಪ್ರಮುಖ ನ್ಯೂನತೆಗಳಿವೆ. ಈ ನ್ಯೂನತೆಗಳನ್ನು ತೆಗೆದುಹಾಕದೆ ಯೋಜನೆಯನ್ನು ಜಾರಿಗೆ ತಂದರೆ ಅದು ಸಮಾನ ಶ್ರೇಣಿ, ಸಮಾನ ಪಿಂಚಣಿಯ ವ್ಯಾಖ್ಯಾನ ಮತ್ತು ಗುರಿಯನ್ನೇ ನಾಶ ಮಾಡುತ್ತದೆ ಎಂದು ಪತ್ರದಲ್ಲಿ ವಿವರಿಸಲಾಗಿದೆ.
ದೆಹಲಿಯ ಜಂತರ್ ಮಂತರ್ ನಲ್ಲಿ ಮಾಜಿ ಯೋಧರು ನಡೆಸುತ್ತಿರುವ ಉಪವಾಸ ಸತ್ಯಾಗ್ರಹ 133ನೇ ದಿನಕ್ಕೆ ಕಾಲಿಟ್ಟಿದ್ದು, ಯೋಜನೆಯನ್ನು ಶೀಘ್ರದಲ್ಲೇ ಜಾರಿಗೆ ತರುವಂತೆ ಮಾಜಿ ಯೋಧರ ವಕ್ತಾರ ಕರ್ನಲ್ ಅನಿಲ್ ಕೌಲ್ ತಿಳಿಸಿದ್ದಾರೆ.
Advertisement