
ಬೆಂಗಳೂರು: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಕರಾಚಿಯಲ್ಲಿ ಇಲ್ಲ ಎಂದು ಪಾಕಿಸ್ತಾನ ಹೈಕಮಿಷನರ್ ಅಬ್ದುಲ್ ಬಸಿತ್ ಹೇಳಿದ್ದಾರೆ. ಬೆಂಗಳೂರು ಇಂಟರ್ ನ್ಯಾಷನಲ್ ಸೆಂಟರ್ ಮತ್ತು ತಕ್ಷಶಿಲಾ ಸಹಯೋಗದಲ್ಲಿ ಬುಧವಾರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ಈ ವಿಷಯ ತಿಳಿಸಿದ್ದಾರೆ.
ಭೂಗತ ಪಾತಕಿ ಛೋಟಾ ರಾಜನ್ ಬಂಧನ ಹಿನ್ನೆಲೆಯಲ್ಲಿ ಅಬ್ದುಲ್ ಬಸಿತ್ ಅವರ ಈ ಹೇಳಿಕೆ ತೀರಾ ಮಹತ್ವ ಪಡೆದಿದೆ. ಜಮ್ಮು-ಕಾಶ್ಮೀರ ಹೊರತುಪಡಿಸಿಯೂ ಭಾರತ-ಪಾಕಿಸ್ತಾನದ ಮಧ್ಯೆ ಮಾತುಕತೆ ಮೂಲಕ ಪರಿಹರಿಸಿಕೊಳ್ಳಬಹುದಾದ ಅನೇಕ ವಿಚಾರಗಳಿವೆ.
ಉಭಯ ದೇಶಗಳ ಮಧ್ಯೆ ಶಾಂತಿ ನೆಲೆಸುವುದಕ್ಕೆ ದ್ವಿಪಕ್ಷೀಯ ಮಾತುಕತೆ ನಡೆಯಬೇಕು ಎಂದು ತಮ್ಮ ಭಾಷಣ ಸಂದರ್ಭದಲ್ಲಿ ಪದೇ ಪದೇ ಪ್ರಸ್ತಾಪಿಸಿದ ಅವರು, ಸಭಿಕರ ಪ್ರಶ್ನೆಗೆ ಉತ್ತರಿಸುವ ಸಂದರ್ಭದಲ್ಲಿ ದಾವೂದ್ ಇಬ್ರಾಹಿಂ ಕರಾಚಿಯಲ್ಲಿಲ್ಲ. ಅವನ ಇರುವಿಕೆ ಬಗ್ಗೆ ನಮಗೇನು ಗೊತ್ತೇ ಇಲ್ಲ. ಎಂದರು.
ಇಷ್ಟು ಹೇಳುತ್ತಿದ್ದಂತೆ ಸಭಿಕರೊಬ್ಬರು ಒಸಾಮಾ ಬಿನ್ ಲಾಡೆನ್ ವಿಚಾರದಲ್ಲೂ ನೀವು ಹೀಗೇ ಹೇಳಿದ್ದಿರಿ ಎಂದು ಕಿಚಾಯಿಸಿದರು.
ದಾವೂದ್ ಇಬ್ರಾಹಿಂ ಕರಾಚಿಯಲ್ಲಾಗಲಿ ಅಥವಾ ಪಾಕಿಸ್ತಾನದ ಯಾವುದೇ ಭಾಗದಲ್ಲಾಗಲಿ ಇಲ್ಲ ಎಂದು ಬಲವಾಗಿ ಪ್ರತಿಪಾದಿಸಿದ ಬಸಿತ್, ದಾವೂದ್ ಎಲ್ಲಿದ್ದಾನೆ ಎಂಬ ಬಗ್ಗೆ ನಿಮ್ಮ ಸರ್ಕಾರಕ್ಕೂ ಸ್ಪಷ್ಟ ಮಾಹಿತಿ ಇಲ್ಲ ಎಂದಿದ್ದಾರೆ. ಇದೇ ಮಾಹಿತಿ ನಮ್ಮಲ್ಲಿಯೂ ಇದೆ. ಆತ ಪಾಕಿಸ್ತಾನದಲ್ಲಿದ್ದಾನೆ ಎಂಬ ಬಗ್ಗೆ ಯಾವುದೇ ಸಾಕ್ಷಾಧಾರ ಇಲ್ಲ ಎಂದು ಹೇಳಿದರು.
ಮಾತುಕತೆ ಅಗತ್ಯ: ಪಾಕಿಸ್ತಾನದ ಬಗ್ಗೆ ಜಗತ್ತಿನ ದೃಷ್ಟಿಕೋನ ತಪ್ಪು ತಿಳುವಳಿಕೆಯಿಂದ ಕೂಡಿದೆ. ಕುಟುಂಬ ಯೋಜನೆ, ಸ್ಥಳೀಯ ಸಂಸ್ಥೆ ಚುನಾವಣೆ ಸೇರಿದಂತೆ ಸಮಾಜ ಮುಕ್ತತೆಯನ್ನು ಒಪ್ಪಿಕೊಳ್ಳುತ್ತಿದೆ. ನಿರ್ಭೀತ ಮಾಧ್ಯಮ ಮತ್ತು ಸ್ವತಂತ್ರ ನ್ಯಾಯಾಂಗ ವ್ಯವಸ್ಥೆಯನ್ನು ಹೊಂದಿದ್ದೇವೆ. 15 ವರ್ಷಗಳ ಹಿಂದೆ ಕುಟುಂಬ ಯೋಜನೆ ಬಗ್ಗೆ ಪಾಕಿಸ್ತಾನದಲ್ಲಿ ಮಾತನಾಡುವುದಕ್ಕೂ ಸಾಧ್ಯವಿರಲಿಲ್ಲ. ಆದರೆ ಈಗ ಸಾಧ್ಯ ಎಂದು ಹೇಳಿದರು.
ಇತಿಹಾಸಕಾರ ರಾಮಚಂದ್ರ ಗುಹಾ ಮಾತನಾಡಿ, ಭಾರತ-ಪಾಕಿಸ್ತಾನ ಮಾತುಕತೆಗೆ ದೆಹಲಿ ಹಾಗೂ ಉತ್ತರ ಭಾರತವನ್ನೇ ಸದಾ ಆಯ್ದುಕೊಳ್ಳಬಾರದು. ಭಾರತದ ಇತರ ಭಾಗದಲ್ಲೂ ಚರ್ಚೆಯಾಗಬೇಕು ಎಂದರು.
Advertisement