
ನವದೆಹಲಿ: ಗೋಹತ್ಯೆ ನಿಷೇಧ ವಿಷಯ ಚರ್ಚೆಯಲ್ಲಿರುವಾಗಲೇ, ರಕ್ಷಣಾ ಸಚಿವಾಲಯ ಮತ್ತೊಂದು ಚರ್ಚಾಸ್ಪದ ವಿಷಯವನ್ನು ಮುಂದಿಟ್ಟಿದೆ. ಸೇನೆಯ ಕೆಲವು ಘಟಕಗಳಲ್ಲಿ ಎಮ್ಮೆ/ಕೋಣಗಳನ್ನು ಹತ್ಯೆ ಮಾಡುವ ಪದ್ಧತಿ ಜಾರಿಯಲ್ಲಿದ್ದು ಇದನ್ನು ನಿಲ್ಲಿಸಬೇಕೆಂದು ರಕ್ಷಣಾ ಸಚಿವಾಲಯ ತನ್ನ ಸೇನಾ ಘಟಕಕ್ಕೆ ಸೂಚನೆ ನೀಡಿದೆ.
ಖಾಸಗಿ ಮಾಧ್ಯಮವೊಂದು ಪ್ರಕಟಿಸಿರುವ ವರದಿಯ ಪ್ರಕಾರ, ರಕ್ಷಣಾ ಸಚಿವಾಲಯ ದಸರಾ ಸಂದರ್ಭದಲ್ಲಿ ಗೂರ್ಖಾ ರೆಜೆಮೆಂಟ್ ಸೈನಿಕರು ಕೋಣಗಳನ್ನು ಹತ್ಯೆ ಮಾಡುವುದನ್ನು ನಿಲ್ಲಿಸಬೇಕೆಂದು ಸೂಚನೆ ನೀಡಿದೆ. ದಸರಾ ಸಂದರ್ಭದಲ್ಲಿ ಕೋಣಗಳನ್ನು ಬಲಿ ಕೊಡುವುದು ಪುರಾತನ ಪದ್ಧತಿ ಎಂಬುದರಲ್ಲಿ ಅನುಮಾನವಿಲ್ಲ. ಆದರೆ ಪ್ರಸ್ತುತ ಭಾರತ ಹೊಂದಿರುವ ಕಾನೂನಿಗೆ ಇದು ವಿರುದ್ಧವಾಗಿರುವ ಹಿನ್ನೆಲೆಯಲ್ಲಿ ಇದನ್ನು ನಿಲ್ಲಿಸಬೇಕೆಂದು ಸಚಿವಾಲಯ ಆದೇಶ ನೀಡಿದೆ.
ಈ ತಿಂಗಳ ಪ್ರಾರಂಭದಲ್ಲೇ ಈ ಆದೇಶ ಹೊರಬಿದ್ದಿದ್ದು, ಅಮಾನುಷ ಪದ್ಧತಿಯಾಗಿರುವ ಹಿನ್ನೆಲೆಯಲ್ಲಿ ಈ ಪದ್ಧತಿಯನ್ನು ಕೈಬಿಡಲು ಸೂಚಿಸಿದೆ ಎಂದು ತಿಳಿದುಬಂದಿದೆ. ಆಚರಣೆಗಳನ್ನು ಮುಂದುವರೆಸಲು ಕೆಲವರು ಇಚ್ಛಿಸುತ್ತಾರೆ. ಅದಕ್ಕಾಗಿ ಕಾನೂನು ಉಲ್ಲಂಘನೆಯಾಗಬಾರದು ಎಂದು ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Advertisement