ನವದೆಹಲಿ: ಹಿಂದೂ ಮತ್ತು ಮುಸ್ಲಿಮರು ಒಂದಾಗಿರುವ ಸಮಯ ಬಂದಿದೆ ಎಂದು ಆರ್ ಎಸ್ ಎಸ್ ಹಾಗೂ ವಿಶ್ವ ಹಿಂದೂ ಪರಿಷತ್ ನಾಯಕರೊಂದಿಗೆ ಆಪ್ತರಾಗಿರುವ ಕಂಚಿ ಕಾಮಕೋಟಿ ಮಠದ 69ನೇ ಪೀಠಾಧಿಪತಿ ಜಯೇಂದ್ರ ಸರಸ್ವತಿ ಹೇಳಿದ್ದಾರೆ.
ಈ ಬಾರಿ ಮುಸ್ಲಿಂ ಮತ್ತು ಹಿಂದೂಗಳು ಒಗ್ಗಟ್ಟಾಗಿ ನಿಲ್ಲುತ್ತಾರೆ. ಎರಡೂ ಧರ್ಮದವರ ಗುರಿ ಒಂದೇ ಎಂದು ತಿಳಿದುಕೊಳ್ಳುತ್ತಿದ್ದಾರೆ, ಹಾಗಾಗಿ, ಎರಡು ಧರ್ಮದವರು ದೇಶದಲ್ಲಿ ಒಗ್ಗಟ್ಟಾಗಿ ನಿಲ್ಲುವ ಸಮಯ ಬಂದಿದೆ ಎಂದು ಅವರು ತಿಳಿಸಿದ್ದಾರೆ.
ತಮ್ಮಲ್ಲಿರುವ ಭಿನ್ನಭಿಪ್ರಾಯವನ್ನು ಮರೆತು ನಾವೆಲ್ಲರು ಒಂದೇ ಎಂದು ಅರ್ಥ ಮಾಡಿಕೊಳ್ಳಬೇಕು. ರಾಷ್ಟ್ರೀಯ ಏಕತೆ ನಮಗೆ ಮುಖ್ಯವಾಗಿದೆ. ಈಗ ಆ ಸಮಯ ಬರುತ್ತಿದೆ ಎಂದು ಅವರು ಹೇಳಿದ್ದಾರೆ.
ದಾದ್ರಿ ಹತ್ಯೆ ಪ್ರಕರಣ, ಮುಂಬೈನಲ್ಲಿ ಶಿವಸೇನೆಯು ನಡೆಸುತ್ತಿರುವ ದಾಂಧಲೆ ಹಾಗೂ ಸಾಹಿತಿಗಳು ಪ್ರಶಸ್ತಿಗಳನ್ನು ಹಿಂದಿರುಗಿಸುತ್ತಿರುವ ಬಗ್ಗೆ ಕೇಳಲಾದ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಸಾಹಿತಿಗಳು ಪ್ರಶಸ್ತಿ ಹಿಂದಿರುಗಿಸುತ್ತಿರುವುದು ಸರಿಯಲ್ಲ ಎಂದಿದ್ದಾರೆ.
ಸಾಹಿತಿಗಳು ಈ ಬಗ್ಗೆ ಸರಿಯಾಗಿ ಯೋಚಿಸಬೇಕು. ಪ್ರಶಸ್ತಿ ಹಿಂದಿರುಗಿಸುವ ಬೆಳವಣಿಗೆ ಸರಿಯಲ್ಲ ಎಂದು ಅವರು, ಭಾರತದಲ್ಲಿ ಗೋಹತ್ಯೆಗೆ ಅವಕಾಶ ನೀಡುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.