ಮುಂಬೈ: ಕಳೆದ ಕೆಲವು ದಿನಗಳಿಂದ ಶೀನಾ ಬೋರಾ ಹತ್ಯೆ ಪ್ರಕರಣ ಮಾಧ್ಯಮಗಳ ಮತ್ತು ಸಾರ್ವಜನಿಕರ ಗಮನವನ್ನು ಸೆಳೆಯುತ್ತಿದ್ದು, ಇದೀಗ ಶೀನಾ ಬರೆಯುತ್ತಿದ್ದ ಡೈರಿ ಪೊಲೀಸರ ಕೈಗೆ ಸಿಕ್ಕಿದೆ. ಅದರಲ್ಲಿ ಶೀನಾ ಎಷ್ಟರ ಮಟ್ಟಿಗೆ ಅವಳ ತಾಯಿಯನ್ನು ದ್ವೇಷಿಸುತ್ತಿದ್ದಳು ಮತ್ತು ಆಕೆ ತನ್ನ ತಂದೆ ಸಿದ್ಧಾರ್ಥ್ ದಾಸ್ ನ್ನು ನೋಡಲು ಎಷ್ಟು ಹಾತೊರೆಯುತ್ತಿದ್ದಳು ಎಂಬುದು ಗೊತ್ತಾಗುತ್ತದೆ.
ಇಂದ್ರಾಣಿ ಮುಖರ್ಜಿ ಮತ್ತು ಶೀನಾ ಬೋರಾಳ ನಡುವೆ ವಿನಿಮಯಗೊಂಡ ಇ-ಮೇಲ್ ಗಳು ಅವರಿಬ್ಬರ ನಡುವಿನ ದ್ವೇಷ ಮನೋಭಾವನೆಯನ್ನು ಸೂಚಿಸುತ್ತದೆ. ಅದರ ಬಗ್ಗೆ ಈಗ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಶೀನಾಳ ಡೈರಿಯಲ್ಲಿ ಆಕೆ ತನ್ನ ತಂದೆಯನ್ನು ನೋಡಬಯಸುತ್ತಿದ್ದಳು ಎಂದು ತಿಳಿದುಬಂದಿದೆ. ಡೈರಿಯಲ್ಲಿ ತನ್ನ ಸ್ನೇಹಿತರ ಹೆಸರುಗಳು, ದೂರವಾಣಿ ಸಂಖ್ಯೆಗಳು ಮತ್ತು ಆಕೆ ತನ್ನ ತಂದೆಯನ್ನುದ್ದೇಶಿಸಿ ಬರೆದ ಪತ್ರಗಳು ಸಿಕ್ಕಿವೆ.
ಶೀನಾ ತನ್ನ ತಂದೆ ಸಿದ್ಧಾರ್ಥ್ ದಾಸ್ ನನ್ನು ನೋಡಬಯಸುತ್ತಿದ್ದಳು ಮತ್ತು ಆತ ಬಂದು ತನ್ನನ್ನು ಭೇಟಿ ಮಾಡುವಂತೆ ಒತ್ತಾಯಿಸುತ್ತಿದ್ದಳು. ಶೀನಾ ಬರೆಯುತ್ತಿದ್ದ ಪತ್ರದ ಒಕ್ಕಣೆಯಿಂದ ಆಕೆ ತನ್ನ ತಂದೆಯ ಜೊತೆ ಸಂಪರ್ಕದಲ್ಲಿದ್ದಳು ಎಂಬುದು ತಿಳಿದುಬರುತ್ತದೆ. ಶೀನಾ 2003ರ ಹೊತ್ತಿಗೆ ಡೈರಿ ಬರೆಯಲು ಆರಂಭಿಸಿದ್ದಳು. ಆದರೆ ಮೊನ್ನೆ ಸಿದ್ಧಾರ್ಥ್ ದಾಸ್ ತಾನು ಶೀನಾಳ ಜೊತೆ ಸಂಪರ್ಕದಲ್ಲಿರಲಿಲ್ಲ ಎಂದು ಹೇಳಿದ್ದ.
ಆಕೆ ತನ್ನ ತಂದೆಗೆ ಹತ್ತನೇ ತರಗತಿಯಲ್ಲಿರುವಾಗ ಬರೆದ ಪತ್ರದಲ್ಲಿ, ತಾನು ಹತ್ತನೇ ತರಗತಿಯಲ್ಲಿರುವುದರಿಂದ ಕಷ್ಟಪಟ್ಟು ಓದುತ್ತಿರುವುದಾಗಿ ತನಗೆ ಪತ್ರ ಬರೆಯಲು ಸಾಧ್ಯವಾಗುವುದಿಲ್ಲ. ಆದರೆ ನೀನು ಯಾಕೆ ನನಗೆ ಪತ್ರ ಬರೆಯುವುದಿಲ್ಲ, ನಾನು ತರಗತಿ, ಕೋಚಿಂಗ್ ಅಂತ ಇಡೀ ದಿನ ಬ್ಯುಸಿಯಾಗಿರುತ್ತೇನೆ, ನೀನು ಹೇಳಿದಂತೆ ಅಧ್ಯಯನಕ್ಕೆ ಹೆಚ್ಚು ಸಮಯ ಮೀಸಲಿಡುತ್ತೇನೆ. ಅಪ್ಪ, ನೀನ್ಯಾಕೆ ಒಂದು ಬಾರಿ ಗುವಾಹಟಿಗೆ ಬರಬಾರದು,ನನಗೆ ನಿನ್ನನ್ನು ನೋಡಬೇಕೆನಿಸುತ್ತದೆ ಎಂದು ಪತ್ರದಲ್ಲಿ ಬೇಡಿಕೊಂಡಿದ್ದಾಳೆ. ಅಲ್ಲದೆ, ಶಾಲೆಯ ಪರೀಕ್ಷೆಯ ಅರ್ಜಿಯೊಂದರಲ್ಲಿ ಜಾತಿ ಕಾಲಂನ್ನು ತುಂಬಬೇಕಾಗಿದೆ. ನಾನು ಯಾವ ಜಾತಿಗೆ ಸೇರಿದ್ದೇನೆ ಅಪ್ಪಾ, ನನ್ನ ಜಾತಿ ಬಗ್ಗೆ ನನಗೆ ಗೊಂದಲವಾಗುತ್ತಿದೆ ಎಂದು ಶೀನಾ ತಿಳಿಸಿದ್ದಾಳೆ. ಅಲ್ಲದೆ ತನ್ನ ಮುಂದಿನ ಓದಿಗೆ ಸಹಾಯ ಮಾಡುವಂತೆ ಕೂಡ ಅವಳು ತನ್ನ ತಂದೆಯನ್ನು ವಿನಂತಿಸಿಕೊಂಡಿದ್ದಾಳೆ. ಇಷ್ಟೆಲ್ಲಾ ಬರೆದ ಪತ್ರವನ್ನು ನನಗೆ ಪೋಸ್ಟ್ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಬೇಸರ ತೋಡಿಕೊಂಡಿದ್ದಾಳೆ.
ಶೀನಾಗೆ ತನ್ನ ತಾಯಿ ಜೊತೆ ಅಷ್ಟು ಸಲುಗೆ, ಪ್ರೇಮವಿರಲಿಲ್ಲ. ಆದರೂ ಕೂಡ ತನ್ನ ತಾಯಿ ಎಂಬ ಕಾರಣಕ್ಕೆ ಮನದ ಮೂಲೆಯಲ್ಲಿ ಪ್ರೀತಿ, ವಾತ್ಸಲ್ಯವಿತ್ತು. ಇಂದ್ರಾಣಿ ಐಎನ್ ಎಕ್ಸ್ ಮೀಡಿಯಾದ ಸಹ ಸಂಸ್ಥಾಪಕಿಯಾದ ಪತ್ರಿಕೆಗಳಲ್ಲಿ ಪ್ರಕಟಗೊಂಡ ವರದಿಗಳನ್ನು, ಪ್ರಭಾವಿ ಮಹಿಳೆಯರಲ್ಲಿ ಇಂದ್ರಾಣಿ ಆಯ್ಕೆಯಾಗಿದ್ದ ಸುದ್ದಿಗಳನ್ನೂ ಸಂಗ್ರಹಿಸಿ ಇಟ್ಟುಕೊಂಡಿದ್ದಳು.
ದಿನಗಳೆದಂತೆ ಶೀನಾಗೆ ಒಂಟಿತನ ಕಾಡಲಾರಂಭಿಸಿತು. 'ನಾನು ಒಂಟಿಯಾಗಿದ್ದೇನೆ, ನನ್ನ ಭವಿಷ್ಯದಲ್ಲಿ ಏನೂ ಇಲ್ಲವೆಂದು ಅನ್ನಿಸುತ್ತದೆ. ಖಿನ್ನತೆ ಉಂಟಾಗುತ್ತಿದೆ. ನಾನು ನನ್ನ ತಾಯಿಯನ್ನು ದ್ವೇಷಿಸುತ್ತೇನೆ. ಅವಳು ತಾಯಿಯಲ್ಲ, ಆಕೆ ಮಾಟಗಾತಿ ಎಂದು ಬೇಸರ ವ್ಯಕ್ತಪಡಿಸಿದ್ದಾಳೆ.
ಶೀನಾಗೆ ತನ್ನ ತಾಯಿ ಪೀಟರ್ ಮುಖರ್ಜಿಯನ್ನು ಮದುವೆಯಾಗುವುದು ಸುತಾರಾಂ ಇಷ್ಟವಿರಲಿಲ್ಲ. ನನ್ನ ತಾಯಿ ಈಗ ಮುದುಕನನ್ನು ಮದುವೆಯಾಗಿದ್ದಾಳೆ.ಇದು ಅಜ್ಜ-ಅಜ್ಜಿಯರಿಗೆ ಇಷ್ಟವಿರಬಹುದು, ಆದರೆ ನನಗಲ್ಲ. ನಾನು ನನ್ನ ತಾಯಿಯನ್ನು ದ್ವೇಷಿಸುತ್ತೇನೆ. ಅವಳಿಗೆ ನನ್ನಲ್ಲಿ ನಿಜವಾದ ಪ್ರೀತಿಯಿಲ್ಲ, ನನಗೆ ಅಳಬೇಕೆನಿಸುತ್ತದೆ, ಆದರೆ ಯಾವಾಗ, ಯಾರ ಮುಂದೆ ಎಂದು ಗೊತ್ತಾಗುವುದಿಲ್ಲ ಎಂದು ತನ್ನ ಅಸಹಾಯಕತೆಯನ್ನು ವ್ಯಕ್ತಪಡಿಸಿದ್ದಾಳೆ.
ಇದೀಗ ಶೀನಾ ಬರೆದ ಡೈರಿ ಮತ್ತು ಅವಳ ಸಾವಿಗೆ ಮುಂಚೆ ಆಕೆ ಮತ್ತು ಇಂದ್ರಾಣಿ ಮಧ್ಯೆ ವಿನಿಮಯಗೊಂಡ ಬೈಗುಳದ ಇ-ಮೇಲ್ ಗಳನ್ನು ಇಟ್ಟುಕೊಂಡು ಮುಂಬೈ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
Advertisement