
ನವದೆಹಲಿ: ದಾವೂದ್ ಇಬ್ರಾಹಿಂ ಮತ್ತು ಎಲ್ಇಟಿ ಉಗ್ರ ಸಂಘಟನೆಯ ಅಧ್ಯಕ್ಷ ಹಫೀಜ್ ಸಯ್ಯದ್ ಇಂತರ ದೇಶದ ಶತ್ರುಗಳ ಬಗ್ಗೆ ಭಾರತ ಚಿಂತಿಸುತ್ತಿಲ್ಲ ಎಂದು ತಿಳಿಯುವುದು ಬೇಡ ಎಂದು ಕೇಂದ್ರ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಇಂದು ಹೇಳಿದ್ದಾರೆ.
"ನಮ್ಮ ಶತ್ರುಗಳನ್ನು ಅಟ್ಟಡಗಿಸಲು ನಾವು ಸದಾ ಸಿದ್ಧರಿದ್ದೇವೆ" ಎಂದು ೧೯೯೩ ರ ಮುಂಬೈ ಸರಣಿ ಸ್ಫೋಟದ ರೂವಾರಿ ದಾವುದ್ ಇಬ್ರಾಹಿಮ್ ಮತ್ತು ಸಯ್ಯದ್ ಮೇಲೆ ಸರ್ಕಾರ ಯಾವ ಕ್ರಮ ಕೈಗೊಂಡಿದೆ ಎಂಬ ಪ್ರಶ್ನೆಗೆ ಉತ್ತರಿಸಿದ್ದಾರೆ.
"ಶತ್ರು ಎಲ್ಲೇ ಇರಲಿ, ಬಾರತ ಅವನ ಬಗ್ಗೆ ಚಿಂತಿಸುತ್ತಿಲ್ಲ ಎಂದು ನಂಬುವದು ಬೇಡ" ಎಂದು ಟಿವಿ ವಾಹಿನಿ ಆಜ್ ತಕ್ ನ 'ಸೀದಿ ಬಾತ್' ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ.
ನರೇಂದ್ರ ಮೋದಿ ಸರ್ಕಾರ ೧೫ ತಿಂಗಳ ಆಡಳಿತ ಮುಗಿಸಿದ್ದರು ಕೂಡ ಪಾಕಿಸ್ತಾನದಲ್ಲಿ ನೆಲೆಸಿರುವ ಈ ಉಗ್ರರ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ ಎಂಬ ದೂರು ಕೇಳಿ ಬಂದಿತ್ತು.
ಇವರ ವಿರುದ್ಧ ರಹಸ್ಯ ಕಾರ್ಯಾಚರಣೆ ನಡೆಸಲಾಗುತ್ತದೆಯೇ ಎಬ ಪ್ರಶ್ನೆಗೆ "ಅದು ಕೂಡ ಆಗಬಹುದು ಆದರೆ ಅದನ್ನು ನಾವು ಮುಂಚಿತವಾಗಿ ಪ್ರಚಾರ ಮಾಡುವುದಿಲ್ಲ. ಕಾರ್ಯಾಚರಣೆ ನಂತರವೂ ಕೂಡ ನಾವು ಪ್ರಚಾರ ಮಾಡಬಹುದು ಅಥವಾ ಮಾಡದೆ ಇರಬಹದು" ಎಂದು ಅವರು ಹೇಳಿದ್ದಾರೆ.
"ವಿಶೇಷ ಕಾರಾಚರಣೆಯ ನಂತರ ಸಾರ್ವಜನಿಕರಿಗೆ ತಿಳಿಸಲಾಗುತ್ತದೆ. ಆದರೆ ಅದರ ಸಮಯವನ್ನು ಸರ್ಕಾರ ಚಿಂತಿಸಬೇಕಾಗುತ್ತದೆ.... ಯಾರಿಗೆ ಗೊತ್ತು ಈ ಕಾರ್ಯಾಚರಣೆ ಈಗ ಜಾರಿಯಲ್ಲಿರಬಹುದು, ಇಲ್ಲದೆಯೂ ಇರಬಹುದು. ಇದು ಮುಗಿದ ನಂತರವಷ್ಟೇ ಹೇಳಲು ಸಾಧ್ಯ" ಎಂದು ರಾಥೋಡ್ ತಿಳಿಸಿದ್ದಾರೆ.
Advertisement