
ಲಕ್ನೋ: ನರೇಂದ್ರ ಮೋದಿ ಸರ್ಕಾರವನ್ನು ಆರೆಸ್ಸೆಸ್ಸ್ ರಿಮೋಟ್ ಕಂಟ್ರೋಲ್ ಮೂಲಕ ನಿಯಂತ್ರಿಸುತ್ತಿದೆ ಎಂದು ಬಹುಜನ್ ಸಮಾಜ್ ಪಾರ್ಟಿ ಮುಖ್ಯಸ್ಥೆ ಮಾಯಾವತಿ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ಆರೆಸ್ಸೆಸ್ಸ್ ಸಭೆಗೆ ಹೋಗಿದ್ದಾರೆ. ಆದರೆ ಅಲ್ಲಿನ ಮಾತುಕತೆಗಳು ಪ್ರಜಾಪ್ರಭುತ್ವಕ್ಕೆ ಶುಭಶಕುನಗಳಾಗಿರಲಿಲ್ಲ. ಕೇಂದ್ರ ಸರ್ಕಾರದ ನಿಯಂತ್ರಣ ನಾಗ್ಪುರದಲ್ಲಿರುವ ಆರೆಸ್ಸೆಸ್ಸ್ ಪ್ರಧಾನ ಕಚೇರಿಯಲ್ಲಿದೆ ಎಂಬುದು ಇಲ್ಲಿ ಸ್ಪಷ್ಟ ಎಂದು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಹೇಳಿದ್ದಾರೆ.
ಮೋದಿ ಸರ್ಕಾರವನ್ನು ಬೆನ್ನು ತಟ್ಟುತ್ತಿರುವ ಆರೆಸ್ಸೆಸ್‌ನ್ನು ಟೀಕಿಸಿದ ಮಾಯಾ, ಆರೆಸ್ಸೆಸ್ಸ್ ಗೆ ಬೆಲೆ ಏರಿಕೆ, ಬಡತನ ಮತ್ತು ನಿರುದ್ಯೋಗ ಸಮಸ್ಯೆಯನ್ನು ಹೋಗಲಾಡಿಸಲು ಕೇಂದ್ರ ಸರ್ಕಾರ ವಿಫಲವಾಗಿರುವುದು ಕಾಣಿಸುತ್ತಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ಈ ಹಿಂದೆ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರವಿರುವಾಗ ಪ್ರಸ್ತುತ ಸರ್ಕಾರವನ್ನು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ 10 ಜನಪಥ್‌ದಿಂದ ನಿಯಂತ್ರಿಸುತ್ತಾರೆ ಎಂದು ಬಿಜೆಪಿ ಹೇಳುತ್ತಿತ್ತು. ಈಗ ಮೋದಿ ಸರ್ಕಾರವೂ ಇನ್ನೊಬ್ಬರಿಂದ ನಿಯಂತ್ರಿಸಲ್ಪಡುತ್ತಿದೆ ಎಂದು ಮಾಯಾ ಹೇಳಿದ್ದಾರೆ.
ಅದೇ ವೇಳೆ ಬೋಧ್‌ಗಯಾವನ್ನು ಮೋದಿ ವಿಶ್ವದ ಸಾಂಸ್ಕೃತಿಕ ರಾಜಧಾನಿ ಎಂದು ಹೇಳಿದ್ದನ್ನು ಲೇವಡಿ ಮಾಡಿದ ಮಾಯಾ ಸಮಸ್ಯೆಗಳಿಗೆ ಬಾಯಿ ಮಾತು ಪರಿಹಾರವಲ್ಲ ಎಂದಿದ್ದಾರೆ.
Advertisement