
ಮುಂಬೈ: ಶೀನಾ ಬೋರಾ ಹತ್ಯೆ ಪ್ರಕರಣದ ಪ್ರಮುಖ ಮೂವರು ಆರೋಪಿಗಳ ಪೊಲೀಸ್ ಕಸ್ಟಡಿ ಇಂದಿಗೆ ಮುಗಿಯುತ್ತಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆಯಿದೆ. ನಿನ್ನೆ ಇಂದ್ರಾಣಿ ಅವರ ಮುಂಬೈಯ ವೊರ್ಲಿಯಲ್ಲಿನ ನಿವಾಸಕ್ಕೆ ತೆರಳಿ ವಿಚಾರಣೆ ನಡೆಸಿದ ಮುಂಬೈ ಪೊಲೀಸರು ಶೀನಾಳನ್ನು ಕೊಂದ ದಿವಸ ರಾತ್ರಿ ಇಂದ್ರಾಣಿಯವರ ನಿವಾಸದಲ್ಲಿ ಕಾರಿನಲ್ಲಿ ಶವವನ್ನು ಮಲಗಿಸಿ ಮರುದಿನ ಮಹಾರಾಷ್ಟ್ರದ ರಾಯಘಡಕ್ಕೆ ತೆಗೆದುಕೊಂಡು ಹೋಗಿದ್ದಾರೆ ಎಂಬುದು ಪೊಲೀಸರಿಗೆ ಗೊತ್ತಾಗಿದೆ.
ಫಿಲ್ಮಿ ಸ್ಟೈಲ್ ನಲ್ಲಿ ಸಾಗುತ್ತಿರುವ ಕೊಲೆಯ ರಹಸ್ಯ ಇದೀಗ ಶೀನಾಳ ಶವವನ್ನು ಎಸೆಯಲು ಮಹಾರಾಷ್ಟ್ರದ ರಾಯ್ ಘಡ ಜಿಲ್ಲೆಯ ಅರಣ್ಯ ಪ್ರದೇಶವನ್ನೇ ಯಾಕೆ ಆಯ್ಕೆ ಮಾಡಿಕೊಂಡರು ಎಂಬ ಬಗ್ಗೆ ತನಿಖೆ ಸಾಗುತ್ತಿದೆ.
ಇಂದ್ರಾಣಿ ಮುಖರ್ಜಿ,ಆಕೆಯ ಮಾಜಿ ಪತಿ ಸಂಜೀವ್ ಖನ್ನಾ ಮತ್ತು ಕಾರಿನ ಚಾಲಕ ಶ್ಯಾಮ್ ರೈ ಅವರ ಪೊಲೀಸ್ ಬಂಧನದ ಅವಧಿಯನ್ನು ನಿನ್ನೆಯಷ್ಟೇ ಸೆಪ್ಟೆಂಬರ್ 7ಕ್ಕೆ ವಿಸ್ತರಿಸಲಾಗಿತ್ತು. ವಿಚಾರಣೆ ಕುರಿತು ನಿನ್ನೆ ಪ್ರತಿಕ್ರಿಯಿಸಿದ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ವೈಭವ್ ಬಗಾಡೆ, ಕೊಲೆ ಪ್ರಕರಣ ಮೇಲ್ನೋಟಕ್ಕೆ ಸಿನಿಮಾ ಶೈಲಿಯಂತೆ ಕಂಡುಬರುತ್ತಿದ್ದರೂ ಶವವನ್ನು ಬಿಸಾಡಲು ರಾಯ್ ಗಢ ಅರಣ್ಯವನ್ನೇ ಯಾಕೆ ಆಯ್ಕೆ ಮಾಡಿಕೊಂಡಿದ್ದರು ಎಂಬ ಬಗ್ಗೆ ತನಿಖೆ ನಡೆಸಬೇಕಾಗಿದೆ ಎಂದು ಹೇಳಿದ್ದಾರೆ.
ಇಂದ್ರಾಣಿ ಮುಖರ್ಜಿ ತನಿಖೆ ವೇಳೆ ಸರಿಯಾದ ಸಹಕಾರ ನೀಡುತ್ತಿಲ್ಲ. ಮೊಂಡು ಹಠ ಮಾಡುತ್ತಿದ್ದಾರೆ. ಅವರಿಂದ ಇನ್ನಷ್ಟು ಮಾಹಿತಿ ಕಲೆಹಾಕಬೇಕಾಗಿದೆ. ರಾಯ್ ಘಡ ಜಿಲ್ಲೆಯಲ್ಲಿ ಸಿಕ್ಕಿದ ಶವದ ಮೂಳೆಗಳ ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಕೂಡ ಇಂದು ಕೈ ಸೇರುವ ಸಾಧ್ಯತೆಯಿದೆ.
ಈ ಮೂವರು ಆರೋಪಿಗಳ ಜೊತೆ ಇನ್ನೂ ಯಾರಾದರು ಕೊಲೆ ಪಿತೂರಿಯಲ್ಲಿ ಭಾಗಿಯಾಗಿರಬಹುದೇ ಎಂದು ಕೂಡ ತನಿಖಾಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ.
Advertisement