
ಬೆಂಗಳೂರು: ನಿವೃತ್ತ ಯೋಧರ ಎಲ್ಲ ಸಮಸ್ಯೆಗಳು ಬಗೆಹರಿದಿವೆ. ಎಲ್ಲ ಬೇಡಿಕೆಗಳು ಈಡೇರಿವೆ ಎಂದು ಹೇಳುವುದಿಲ್ಲ. ಇಷ್ಟಾದ ಮೇಲೂ ಕೆಲವು ಸಣ್ಣಪುಟ್ಟಸಮಸ್ಯೆಗಳು ಇದ್ದೇ ಇರುತ್ತವೆ. ಇದಕ್ಕೆಲ್ಲಾ ಹೋರಾಟ ನಡೆಸುವ ಅಗತ್ಯವಿಲ್ಲ ಎಂದು ಕೇಂದ್ರ ರಕ್ಷಣಾ ಸಚಿವ ಮನೋಹರ ಪರ್ರಿಕರ್ ಹೇಳಿದ್ದಾರೆ.
ನಗರದಲ್ಲಿ ಭಾನುವಾರ ಸುದ್ದಿಗಾರರ ಜತೆ ಮಾತನಾಡಿ, ವಿಮಾ ಸೌಲಭ್ಯ ಸೇರಿದಂತೆ ಕೆಲವು ಬೇಡಿಕೆಗಳು ಇನ್ನೂ ಬಾಕಿ ಇವೆ. ಅವುಗಳನ್ನು ಸಮಿತಿ ಶಿಫಾರಸು ಮಾಡಿದೆ. ಅದನ್ನು ಸರ್ಕಾರ ಹಂತಹಂತವಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು. ಸಮಾನ ಹುದ್ದೆ- ಸಮಾನ ಪಿಂಚಣಿ ಸಮಸ್ಯೆ 1973ರಲ್ಲಿಯೇ ಆರಂಭವಾಗಿತ್ತು. ಆಗ 3ನೇ ಹಣಕಾಸು ಆಯೋಗವಿತ್ತು. ಆಗಿನಿಂದಲೂ ಪಿಂಚಣಿ ಕಡಿಮೆ ನೀಡಲಾಗುತ್ತಿತ್ತು. ಆದರೆ ಈಗ ನಿವೃತ್ತ ಸೇನಾನಿಗಳು ಕೇಳುತ್ತಿರುವುದು ಹಿಂದಿನಿಂದಲೂ ಕಡಿಮೆಯಾಗಿರುವುದನ್ನು ಸರಿಪಡಿಸಿ ಎನ್ನುತ್ತಿದ್ದಾರೆ.
ಅಂದರೆ ನಿವೃತ್ತ ಸೈನಿಕರ ಪಿಂಚಣಿ ಆರಂಭವಾದಾಗಿನಿಂದಲೂ ಸಮಾನ ಪಿಂಚಣಿ ಸಿಗುವಂತಾಗಬೇಕೆಂದು ಒತ್ತಾಯಿಸುತ್ತಿದ್ದಾರೆ. ನಿವೃತ್ತ ಯೋಧರ ಈ ಬೇಡಿಕೆಯನ್ನು ಹಿಂದಿನ ಅನೇಕ ಸಮಿತಿಗಳು ತಿರಸ್ಕರಿಸಿವೆ. ಆದರೆ ಇತ್ತೀಚಿನ ಕೋಶಿಯಾರ್ ನೇತೃತ್ವದ ಸಂಸದೀಯ ಸಮಿತಿ ಮಾತ್ರ ಇದನ್ನು ಒಪ್ಪಿಕೊಂಡಿದೆ. ಅದರಲ್ಲೂ ವಿಶೇಷವಾಗಿ ಸಂಸದ ರಾಜೀವ್ ಚಂದ್ರಶೇಖರ್ಅವರು ಕೋರಿಕೆ ಮೇರೆಗೆ ಶಿಫಾರಸು ಮಾಡಿದೆ ಎಂದು ಸಚಿವರು ಹೇಳಿದರು.
ಹಿಂದಿನ ಕಾಂಗ್ರೆಸ್ ನೇತೃತ್ವ ಸರ್ಕಾರ ಒಆರ್‍ಒಪಿಗೆ ಕೇವಲ ರು.500ಕೋಟಿಗಳನ್ನು ಮಾತ್ರ ಮೀಸಲಿರಿಸಿತ್ತು. ಆದರೆ ನಾವು ಒಆರ್‍ಒಪಿ ಜಾರಿಗೊಳಿಸುವ ಭರವಸೆ ನೀಡಿದ್ದೆವು. ಅದರಂತೆ
ರು.1000 ಕೋಟಿ ಮೀಸಲಿಟ್ಟಿದ್ದೇವೆ. ಏನೇ ಆದರೂ ನಿವೃತ್ತ ಯೋಧರ ಹಣಕಾಸಿನ ಸಮಸ್ಯೆ ಪರಿಹಾರವಾಗಬೇಕು. ಆದರೆ ಕೆಲವು ಸಣ್ಣಪುಟ್ಟ ಸಮಸ್ಯೆಗಳಿರುತ್ತವೆ. ಹಾಗೆಯೇ ಬೇಡಿಕೆಗಳೂ ಇರುತ್ತವೆ. ಅವುಗಳನ್ನು ಬಗೆಹರಿಸುತ್ತೇವೆ. ಸದ್ಯಕ್ಕೆ ದೊಡ್ಡ ಸಮಸ್ಯೆ ಬಗೆಹರಿಸಿದ್ದೇವೆ. ಆದ್ದರಿಂದ ನಿವೃತ್ತ ಯೋಧರ ಬಹುದಿನಗಳ ಬೇಡಿಕೆ ಬಹುತೇಕ ಇತ್ಯರ್ಥಗೊಂಡಿದೆ. ಈ ಸಮಿತಿ ರು.1300 ಕೋಟಿಗಳ ಪ್ಯಾಕೇಜ್ ಅಂದಾಜಿಸಿದೆ. ಆದರೆ ಇದು ಎಷ್ಟರ ಮಟ್ಟಿಗೆ ಸರಿಯಾಗುತ್ತದೆ ಎಂದು ತಾವು ನೋಡಿಲ್ಲ ಎಂದು ಪ್ರತಿಕ್ರಿಯಿಸಿದರು.
ಸಾಮಾನ್ಯವಾಗಿ ಯೋಧರು 35ರಿಂದ 40 ವಯಸ್ಸಿನಲ್ಲಿ ಅವಧಿ ಪೂರ್ವ ನಿವೃತ್ತಿ ಪಡೆಯುತ್ತಾರೆ. ಅಂಥವರು ಶೇ.90ರಷ್ಟಿದ್ದಾರೆ. ಇವರ ಸೇವಾ ಅವಧಿ ಕಡಿಮೆ ಇರುವುದರಿಂದ ಇವರು ಸಹಜವಾಗಿಯೇ 3 ಮತ್ತು 4ರ ಹಣಕಾಸು ಆಯೋಗದ ಲಾಭದಿಂದ ವಂಚಿತರಾಗಿದ್ದಾರೆ. ಅದನ್ನು ಈಗ ಸರಿಪಡಿಸುವುದು ಕಷ್ಟ ಎಂದರು. ಇದಕ್ಕೂ ಮುನ್ನ ಸಚಿವರು ನಗರದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಸೈನಿಕ ಸ್ಮಾರಕದ ಕಾಮಗಾರಿಗಳನ್ನು ಪರಿಶೀಲಿಸಿದರು. ಸುಮಾರು 7 ಎಕರೆ ಜಾಗದಲ್ಲಿ ನಿರ್ಮಾಣವಾಗುತ್ತಿರುವ ರಾಷ್ಟ್ರೀಯ ಸ್ಮಾರಕಕ್ಕೆ ಕೇಂದ್ರ ಅಗತ್ಯ ನೆರವು ನೀಡಲಿದೆ ಎಂದೂ ಅವರು ಭರವಸೆ ನೀಡಿದರು. ಗೃಹ ಸಚಿವ ಕೆ.ಜೆ.ಜಾರ್ಜ್, ಸಂಸದ ರಾಜೀವ್ ಚಂದ್ರಶೇಖರ್, ಹಿರಿಯ ಸೇನಾನಿ ಎಂ.ಕೆ.ಚಂದ್ರಶೇಖರ್, ಏರ್ ಮಾರ್ಷಲ್ ಕಿಂಗ್‍ಲೀ ಉಪಸ್ಥಿತರಿದ್ದರು.
Advertisement