
ನವದೆಹಲಿ: ಸರಕು ಮತ್ತು ಸೇವಾ ತೆರಿಗೆ ಮಸೂದೆ ಅಂಗೀಕಾರಕ್ಕೆ ವಿಶೇಷ ಅಧಿವೇಶನ ನಡೆಸದೆ ಇರಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ.
ಜಿಎಸ್ ಟಿ ಮಸೂದೆ ಅಂಗೀಕಾರಕ್ಕೆ ಕಾಂಗ್ರೆಸ್ ನಿಂದ ಬೆಂಬಲ ಸಿಗುವ ಯಾವುದೇ ಲಕ್ಷಣ ಕಾಣದೇ ಇರುವುದರಿಂದ, ಸಂಸದೀಯ ವ್ಯವಹಾರಗಳ ಸಂಪುಟ ಸಮಿತಿ ಸಭೆಯಲ್ಲಿ ವಿಶೇಷ ಸಂಸತ್ ಅಧಿವೇಶನ ನಡೆಸದೆ ಇರಲು ಕೇಂದ್ರ ಸರ್ಕಾರ ನಿರ್ಧಾರ ಕೈಗೊಂಡಿದೆ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ.
ಮಸೂದೆಗೆ ಸಂಬಂಧಿಸಿದ ಮೂರು ಬೇಡಿಕೆಗಳಿಗೆ ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸುವವರೆಗೂ ವಿಶೇಷ ಅಧಿವೇಶನ ನಡೆಸಿದರೂ ಜಿಎಸ್ ಟಿ ಮಸೂದೆ ಅಂಗೀಕಾರಕ್ಕೆ ಬೆಂಬಲಿಸುವುದಿಲ್ಲ ಎಂದು ಕಾಂಗ್ರೆಸ್ ಸ್ಪಷ್ಟಪಡಿಸಿದೆ. ಈ ಹಿನ್ನೆಲೆಯಲ್ಲಿ ವಿಶೇಷ ಅಧಿವೇಶನ ನಡೆಸಿದರೂ ಕಾಂಗ್ರೆಸ್ ನಿಂದ ಮತ್ತೊಮ್ಮೆ ಗದ್ದಲ ಉಂಟಾಗಿ ಅಧಿವೇಶನ ವ್ಯರ್ಥವಾಗುವ ಸಾಧ್ಯತೆ ಇದೆ ಆದ್ದರಿಂದ ಕೇಂದ್ರ ಸರ್ಕಾರ ಅಧಿವೇಶನ ಕರೆಯುವ ನಿರ್ಧಾರವನ್ನು ಕೈಬಿಟ್ಟಿದೆ.
ಕಾಂಗ್ರೆಸ್ ಜಿಎಸ್ ಟಿ ಮಸೂದೆ ಅಂಗೀಕಾರ ವಿಷಯದಲ್ಲಿ ಹಠಮಾರಿತನ ಪ್ರದರ್ಶಿಸುತ್ತಿದೆ, ಕಾಂಗ್ರೆಸ್ ನಡೆದುಕೊಳ್ಳುತ್ತಿರುವುದನ್ನು ನೋಡಿದರೆ, ಅಭಿವೃದ್ಧಿಗೆ ಅವಕಾಶ ನೀಡದೇ 2014 ರ ಲೋಕಸಭಾ ಚುನಾವಣೆಯಲ್ಲಿ 44 ಸ್ಥಾನಕ್ಕಿಳಿಸಿದ ಜನತೆ ಮೇಲೆ ಸೇಡು ತೀರಿಸಿಕೊಳ್ಳುತ್ತಿರುವಂತಿದೆ ಎಂದು ಜೇಟ್ಲಿ ಹೇಳಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಕೇಂದ್ರ ಸರ್ಕಾರ ಯತ್ನಿಸುತ್ತಿದೆ. ಆದರೂ ಕಾಂಗ್ರೆಸ್ ಹಠಮಾರಿತನ ಬಿಡುತ್ತಿಲ್ಲ ಎಂದು ಜೇಟ್ಲಿ ಹೇಳಿದ್ದಾರೆ.
Advertisement