
ನವದೆಹಲಿ: ಸೌದಿ ಅರೇಬಿಯಾ ರಾಯಭಾರಿಯಿಂದ ಅತ್ಯಾಚಾರಕ್ಕೊಳಗಾಗಿ ಬಂಧಿಸಲ್ಪಟ್ಟಿದ್ದ ಇಬ್ಬರು ನೇಪಾಳಿ ಮೂಲದ ಮಹಿಳೆಯರು ತಮ್ಮ ಭಯಾನಕ ಪರಿಸ್ಥಿತಿ ಬಗ್ಗೆ ಬುಧವಾರ ಮಾತನಾಡಿದ್ದು, ತಮಗೆ ಜೀವಬೆದರಿಕೆಯನ್ನು ಸಹ ಒಡ್ಡಿದ್ದರು ಎಂದು ಹೇಳಿದ್ದಾರೆ.
ಸೌದಿ ರಾಯಭಾರಿ ವಿರುದ್ಧ ಗುರುಗಾಂವ್ ಪೊಲೀಸರು ಅತ್ಯಾಚಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆದರೆ ಈ ಆರೋಪವನ್ನು ಸೌದಿ ರಾಯಭಾರ ಕಚೇರಿ ಅಧಿಕಾರಿಗಳು ತಳ್ಳಿ ಹಾಕಿದ್ದಾರೆ.
ನೇಪಾಳ ಮೂಲದ ತಾಯಿ, ಮಗಳಿಬ್ಬರನ್ನು ಉತ್ತಮ ಭವಿಷ್ಯ ನೀಡುವುದಾಗಿ ಹೇಳಿ ನಂಬಿಸಿ ಭಾರತಕ್ಕೆ ಕರೆತರಲಾಗಿತ್ತು. ಆದರೆ ಕಳೆದ ನಾಲ್ಕು ತಿಂಗಳಿನಿಂದ ತಮಗೆ ಸಂಬಳ ನೀಡಿರಲಿಲ್ಲ. ಈಗ ನಮಗೆ ನಮ್ಮ ಮನೆಗೆ ಹಿಂತಿರುಗಿ ಹೋಗಬೇಕೆನ್ನಿಸುತ್ತದೆ ಎಂದು ಹೇಳಿದ್ದಾರೆ.
'' ಅಪಾರ್ಟ್ ಮೆಂಟ್ ನ ರೂಂನಲ್ಲಿ ನಮ್ಮನ್ನು ಕೂಡಿ ಹಾಕಿ ಶಬ್ದ ಮಾಡದಂತೆ ಹೇಳುತ್ತಿದ್ದರು. ಶಬ್ದ ಮಾಡಿದರೆ, ಯಾರಿಗಾದರು ಹೇಳಿದರೆ ಕೊಂದುಹಾಕುವುದಾಗಿ ಚಾಕು ತೋರಿಸಿ ಬೆದರಿಕೆ ಹಾಕುತ್ತಿದ್ದರು'' ಎಂದು ಮಹಿಳೆಯರು ತಮ್ಮ ದೇಹದಲ್ಲಾದ ಗಾಯಗಳನ್ನು ತೋರಿಸುತ್ತಾ ಆರೋಪಿಸಿದ್ದಾರೆ.
'' ರಾಯಭಾರ ಕಚೇರಿಯ ಅಧಿಕಾರಿ ಒಳ್ಳೆಯ ಮನುಷ್ಯ ಎಂದು ನಂಬಿಸಿ ನಮ್ಮನ್ನು ಇಲ್ಲಿಗೆ ಕರೆತಂದರು. ಮನೆಕೆಲಸ ಮಾಡಿಸಲು ನಮ್ಮನ್ನು ಇಲ್ಲಿಗೆ ಕರೆಸಿಕೊಳ್ಳಲಾಯಿತು. ಆದರೆ ಇಲ್ಲಿಗೆ ಬಂದ ನಂತರ ನಮ್ಮ ಪರಿಸ್ಥಿತಿ ಸಂಪೂರ್ಣ ಭಿನ್ನವಾಗಿತ್ತು ಎಂದು ಹೇಳಿದ್ದು, ತಪ್ಪಿತಸ್ಥರಿಗೆ ಕೂಡಲೇ ಶಿಕ್ಷೆಯಾಗುವಂತೆ ಒತ್ತಾಯಿಸಿದ್ದಾರೆ.
ತಾಯಿ-ಮಗಳ ರಕ್ಷಣೆ ಕಾರ್ಯದಲ್ಲಿ ಗುರುಗಾಂವ್ ಪೊಲೀಸರಿಗೆ ಸಹಕರಿಸಿದ ಎನ್ ಜಿಒ ಸಂಘಟನೆ ಕಾರ್ಯಕರ್ತರು, ಅಮಾಯಕರನ್ನು ತಲಾ ಒಂದು ಲಕ್ಷ ರೂಪಾಯಿಗೆ ಭಾರತದ ವ್ಯಕ್ತಿಯೊಬ್ಬರಿಗೆ ಮಾರಾಟ ಮಾಡಲಾಗಿದೆ ಎಂದು ಹೇಳಿದ್ದಾರೆ. ನೇಪಾಳದಲ್ಲಿ ಭೂಕಂಪವಾದ ನಂತರ ತಾಯಿ-ಮಗಳಿಬ್ಬರನ್ನು ತಿಂಗಳಿಗೆ 30 ಸಾವಿರ ರೂಪಾಯಿ, ಊಟ, ವಸತಿ ವ್ಯವಸ್ಥೆ ನೀಡುವುದಾಗಿ ಹೇಳಿ ಕಪ್ಲನಾ ಎಂಬುವವರು ಗುರುಗಾಂವ್ ಗೆ ಕರೆಸಿಕೊಂಡರು.ಆದರೆ ನಂತರ ಅವರನ್ನು ಅನ್ವರ್ ಎಂಬುವವರಿಗೆ ಒಂದು ಲಕ್ಷ ರೂಪಾಯಿಗೆ ಮಾರಾಟ ಮಾಡಲಾಯಿತು. ನಂತರ ಸೌದಿ ಅರೇಬಿಯಾದ ಜೆಡ್ಡಾ ನಗರಕ್ಕೆ ರೆದೊಯ್ಯಲಾಯಿತು. ಪುನಹ ಭಾರತಕ್ಕೆ ಬಂದ ನಂತರ ಸಮಸ್ಯೆ ಆರಂಭವಾಯಿತು ಎಂದು ಎನ್ ಜಿಒ ಅಧಿಕಾರಿಗಳು ಹೇಳುತ್ತಾರೆ.
ಎನ್ ಜಿಒ ನೀಡಿದ ಮಾಹಿತಿ ಆಧಾರದ ಮೇಲೆ ಗುರುಗಾಂವ್ ಪೊಲೀಸರು ಐಶಾರಾಮಿ ಫ್ಲ್ಯಾಟ್ ಮೇಲೆ ದಾಳಿ ನಡೆಸಿ ಮಹಿಳೆಯರನ್ನು ರಕ್ಷಿಸಿದ್ದಾರೆ. ಆರೋಪಿಗಳ ವಿರುದ್ಧ ಎಫ್ ಐಆರ್ ದಾಖಲಾಗಿದೆ. ಆರೋಪಿಗಳ ವಿಚಾರಣೆಗೆ ಗುರುಗಾಂವ್ ಪೊಲೀಸರು ನೇಪಾಳ ರಾಯಭಾರಿಯ ನೆರವು ಕೇಳಿದ್ದಾರೆ.
ಈ ಕುರಿತು ಮಾತನಾಡಿರುವ ವಿದೇಶಾಂಗ ಇಲಾಖೆ ವಕ್ತಾರರು, ಸ್ಥಳೀಯ ಪೊಲೀಸರಿಂದ ನೆರವು ಕೇಳಿರುವುದಾಗಿ ತಿಳಿಸಿದ್ದಾರೆ. ಪ್ರಕರಣ ಕುರಿತು ಸೌದಿ ಅರೇಬಿಯಾ ರಾಯಭಾರ ಕಚೇರಿ ವಿದೇಶಾಂಗ ಇಲಾಖೆಯೊಂದಿಗೆ ಸಂಪರ್ಕದಲ್ಲಿದೆ.
Advertisement