ಚಹಾ ಮಾರುತ್ತಾ ಹಿಂದಿ ಭಾಷೆ ಕಲಿತುಕೊಂಡೆ: ನೆನಪುಗಳಿಗೆ ಜಾರಿದ ಪ್ರಧಾನಿ

ಹಿಂದಿ ಭಾಷೆಯ ಅಭಿವೃದ್ಧಿಗೆ ಮತ್ತು ಅದು ಹೆಚ್ಚು ಜನರನ್ನು ತಲುಪಲು ದೇಶದ ಜನತೆ ಶ್ರಮಿಸಬೇಕು ಎಂದು ಪ್ರಧಾನ ಮಂತ್ರಿ...
ಪ್ರಧಾನಿ ನರೇಂದ್ರ ಮೋದಿ(ಸಂಗ್ರಹ ಚಿತ್ರ)
ಪ್ರಧಾನಿ ನರೇಂದ್ರ ಮೋದಿ(ಸಂಗ್ರಹ ಚಿತ್ರ)

ಭೋಪಾಲ್: ಹಿಂದಿ ಭಾಷೆಯ ಅಭಿವೃದ್ಧಿಗೆ ಮತ್ತು ಅದು ಹೆಚ್ಚು ಜನರನ್ನು ತಲುಪಲು ದೇಶದ ಜನತೆ ಶ್ರಮಿಸಬೇಕು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

ಮಧ್ಯಪ್ರದೇಶ ರಾಜಧಾನಿ ಭೋಪಾಲ್ ನಲ್ಲಿ ಗುರುವಾರ 10ನೇ ವಿಶ್ವ ಹಿಂದಿ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಪ್ರಧಾನಿ ತಾವು ಹಿಂದಿ ಭಾಷೆ ಕಲಿತದ್ದನ್ನು ಸ್ಮರಿಸಿಕೊಂಡರು.
ತಾವು ರೈಲ್ವೆ ಸ್ಟೇಷನ್ ನಲ್ಲಿ ಚಹಾ ಮಾರಾಟ ಮಾಡುತ್ತಾ ಹಿಂದಿ ಭಾಷೆ ಕಲಿತೆ. ಗುಜರಾತ್ ನಲ್ಲಿ ಚಹಾ ಮಾರಾಟ ಕಾಯಕವನ್ನು ಆರಂಭಿಸಿದ ದಿನಗಳನ್ನು ನೆನಪು ಮಾಡಿಕೊಂಡ ಅವರು, ಚಹಾ ತಯಾರಿಸಲು ಹಾಲು ಖರೀದಿಸುತ್ತಿದ್ದ ಉತ್ತರ ಪ್ರದೇಶದ ಹಾಲು ಮಾರಾಟಗಾರರಿಂದ ಹಿಂದಿ ಭಾಷೆ ಕಲಿತೆನು. ರೈಲ್ವೆ ನಿಲ್ದಾಣದಲ್ಲಿ ಟೀ ಮಾರುತ್ತಾ ಹಲವರೊಡನೆ ಮಾತನಾಡಿ ಹಿಂದಿ ಭಾಷೆ ಬಂತು ಎಂದು ಹಿಂದಿನ ದಿನಗಳನ್ನು ಪ್ರಧಾನಿ ಸವಿದರು.

ಹಿಂದಿ ನನ್ನ ಮಾತೃಭಾಷೆ ಅಲ್ಲ. ನನ್ನ ಮಾತೃಭಾಷೆ ಗುಜರಾತಿ. ಹಾಗಂತ ಹಿಂದಿ ಭಾಷೆ ಗೊತ್ತಿರದಿದ್ದರೆ ನಾನೇನು ಮಾಡಬೇಕಾಗಿತ್ತು. ದೇಶದ ಇಷ್ಟು ಜನರನ್ನು ಹೇಗೆ ತಲುಪಬೇಕಾಗಿತ್ತು? ಎಂದು ಕೇಳಿದರು. ನನಗೆ ಭಾಷೆಯ ಶಕ್ತಿ ಚೆನ್ನಾಗಿ ತಿಳಿದಿದೆ ಒಂದು ಭಾಷೆಗೆ ಅದರದೇ ಆದ ಶಕ್ತಿ ಇದೆ. ಅದನ್ನು ಸಮೃದ್ಧಗೊಳಿಸಲು ಭಾರತೀಯರು ಶ್ರಮಿಸಬೇಕು ಎಂದು  ಒತ್ತಾಯಿಸಿದರು.

ಸ್ವಾತಂತ್ರ್ಯ ಹೋರಾಟಗಾರರಲ್ಲಿ ಹೆಚ್ಚಿನವರ ಮಾತೃಭಾಷೆ ಹಿಂದಿಯಾಗಿರಲಿಲ್ಲ,ಆದರೂ ದೇಶದ ಜನರ ಮೇಲೆ ಪ್ರಭಾವವನ್ನುಂಟುಮಾಡುವ ಉದ್ದೇಶದಿಂದ ಹಿಂದಿ ಭಾಷೆಯನ್ನೇ ತಮ್ಮ ಸಂಪರ್ಕ, ವ್ಯಾವಹಾರಿಕ ಭಾಷೆಯಾಗಿ ಬಳಸಿಕೊಂಡರು.ನೇತಾಶಿ ಸುಭಾಷ್ ಚಂದ್ರ ಬೋಸ್, ಲೋಕಮಾನ್ಯ ತಿಲಕ, ಮಹಾತ್ಮಾ ಗಾಂಧಿ, ಕಾಕಾ ಸಾಹೇಬ್ ಕಲೇತ್ಕರ್, ರಾಜಗೋಪಾಲಾಚಾರ್ಯ ಮೊದಲಾದವರು ಹಿಂದಿ ಚಳವಳಿಯನ್ನೇ ಮಾಡಿದರು. ಅವರಿಗೆ ಭಾಷೆಯ ಮಹತ್ವ ತಿಳಿದಿತ್ತು ಎಂದರು.

ಬೇರೆ ಬೇರೆ ಭಾಷೆಗಳ ಉತ್ತಮ ಅಂಶಗಳನ್ನು ಅಳವಡಿಸಿಕೊಂಡು ಹಿಂದಿ ಭಾಷೆಯನ್ನು ಬಲಪಡಿಸಬೇಕು. ಪ್ರತಿ ರಾಜ್ಯದಲ್ಲಿ ಅಪಾರವಾದ ಭಾಷಾ ಸಂಪತ್ತು ಇದ್ದು, ಅವುಗಳನ್ನು ಸಂಪರ್ಕಿಸಲು ಹಿಂದಿಯನ್ನು ಸಾಧನವಾಗಿ ಬಳಸಿಕೊಂಡರೆ ನಮ್ಮ ಭಾಷೆ ಬಲವರ್ಧನೆಯಾಗುತ್ತದೆ. ಹಿಂದಿ ಭಾಷೆಯನ್ನು ಮರೆತರೆ ನಮ್ಮ ದೇಶಕ್ಕೆ ನಷ್ಟ ಎಂದರು.

ಭಾಷೆಯನ್ನು ರಕ್ಷಿಸುವುದು ಪ್ರತಿ ಪೀಳಿಗೆಯ ಜನರ ಜವಾಬ್ದಾರಿ.  ಸಾಧ್ಯವಾದರೆ ಅವುಗಳ ಪರಂಪರೆಯನ್ನು ಕಾಪಾಡಿ ಮುಂದಿನ ಪೀಳಿಗೆಗೆ ಪರಿಚಯಿಸಬೇಕು ಎಂದು ಕರೆ ನೀಡಿದರು.
ವಿಶ್ವ ಹಿಂದಿ ಸಮ್ಮೇಳನದ ಅಂಗವಾಗಿ ಅಂಚೆಚೀಟಿಯನ್ನು ಬಿಡುಗಡೆ ಮಾಡಿದರು.

ಸಮ್ಮೇಳನದಲ್ಲಿ ಮಾತನಾಡಿದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಇಲ್ಲಿಯವರೆಗಿನ ಸಮ್ಮೇಳನಗಳಿಗಿಂತ ಈ ಬಾರಿಯ ಸಮ್ಮೇಳನ ವಿಭಿನ್ನವಾಗಿದೆ. ಇಲ್ಲಿ ಸಾಹಿತಿಗಳು ಮತ್ತು ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದು, ಹಿಂದಿ ಭಾಷೆಯ ಮೇಲೆ ಮಾತ್ರ ಗಮನ ಕೇಂದ್ರೀಕರಿಸಲಾಗಿದೆ ಎಂದರು.

ಮುಂದಿನ ದಿನಗಳಲ್ಲಿ ಜಾರಿಗೆ ತರಬೇಕಾದ 12 ಅಂಶಗಳನ್ನು ಈ ಸಮ್ಮೇಳನದಲ್ಲಿ ಚರ್ಚಿಸಿ ಶಿಫಾರಸ್ಸು ಮಾಡಲಾಗುವುದು. ಅವುಗಳನ್ನು ಆದಷ್ಟು ಶೀಘ್ರವೇ ಜಾರಿಗೆ ತರಲಾಗುವುದು ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com