ಉದ್ಧವ್ ಠಾಕ್ರೆ
ಉದ್ಧವ್ ಠಾಕ್ರೆ

ಮುಸ್ಲಿಂಮರು ಪಾಕ್‌ಗೆ ಹೋಗ್ತಾರೆ, ಜೈನರು ಹೋಗುವುದಾದರೂ ಎಲ್ಲಿಗೆ?

ಜೈನರು ಮುಸ್ಲಿಂರಂತೆ ಧರ್ಮಾಂಧರಾಗಬಾರದು. ಮುಸ್ಲಿಮರಿಗಾದರೆ ಹೋಗಲು ಪಾಕಿಸ್ತಾನವಿದೆ. ಜೈನರು ಎಲ್ಲಿಗೆ ಹೋಗುತ್ತಾರೆ? ಎಂದು...
Published on

ಮುಂಬೈ: ಜೈನರ ಪವಿತ್ರ ಉಪವಾಸ ವ್ರತ ಪರ್ಯೂಶನ್ ಪರ್ವ ಪ್ರಯುಕ್ತ ಮುಂಬೈಯಲ್ಲಿ ಮಾಂಸಾಹಾರ ನಿಷೇಧಿಸಿದ ಬೃಹತ್ ಮುಂಬೈ ಮಹಾನಗರ ಪಾಲಿಕೆ ಹಾಗೂ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಶಿವಸೇನೆ ಗುಡುಗಿದೆ.

ಶಿವಸೇನೆಯ ಮುಖವಾಣಿ ಸಾಮ್ನಾದಲ್ಲಿ ಮಾಂಸಾಹಾರ ನಿಷೇಧದ ನಿರ್ಧಾರ ಸರಿಯಲ್ಲ ಎಂದು ಬರೆಯಲಾಗಿದೆ. ಜೈನರು ಮುಸ್ಲಿಂರಂತೆ ಧರ್ಮಾಂಧರಾಗಬಾರದು. ಮುಸ್ಲಿಮರಿಗಾದರೆ ಹೋಗಲು ಪಾಕಿಸ್ತಾನವಿದೆ. ಜೈನರು ಎಲ್ಲಿಗೆ ಹೋಗುತ್ತಾರೆ? ಎಂದು ಶಿವಸೇನೆ ಜೈನರ ವಿರುದ್ಧ ಗುರ್ ಎಂದಿದೆ. ಅದೇ ವೇಳೆ ಮಣ್ಣಿನ ಮಕ್ಕಳಾದ ನಮ್ಮನ್ನು ಕೆಣಕಬೇಡಿ ಎಂದು ಶಿವಸೇನೆ ಜೈನರಿಗೆ ಎಚ್ಚರಿಕೆಯನ್ನೂ ನೀಡಿದೆ.

 ಪರ್ಯೂಶನ್ ಪರ್ವದಲ್ಲಿ ಜೈನ ಸಮುದಾಯದವರು 8 ದಿನಗಳ ಕಾಲ ಉಪವಾಸ ಕೈಗೊಂಡು ಪ್ರಾರ್ಥನೆ ಸಲ್ಲಿಸುತ್ತಾರೆ. ಈ ಹಿನ್ನೆಲೆಯಲ್ಲಿ 4 ದಿನಗಳ ಕಾಲ ಮುಂಬೈನಲ್ಲಿ ಮಾಂಸಾಹಾರಕ್ಕೆ ನಿಷೇಧ ಹೇರಬೇಕು. ನಮ್ಮ ಸಮುದಾಯ ಹಿಂಸೆಯನ್ನು ಸಹಿಸುವುದಿಲ್ಲ ಎಂದು ಜೈನ ಸಮುದಾಯದವರು ಹೇಳಿದ್ದರು.

ಇದಕ್ಕೆ ಸಾಮ್ನಾದಲ್ಲಿ ಉತ್ತರಿಸಿದ ಶಿವಸೇನೆ 1992-93ರ ಗಲಭೆ ವೇಳೆ ಶಿವಸೇನೆ ಜೈನರ ವ್ಯಾಪಾರವನ್ನು ರಕ್ಷಿಸಿತ್ತು. ಇದಕ್ಕೆ ಜೈನರು ಬಾಳಾಸಾಹೇಬ್ ಅವರಿಗೆ ಧನ್ಯವಾದಗಳನ್ನು ಅರ್ಪಿಸಲು ಮಾತೋಶ್ರೀ ಮುಂದೆ ಸಾಲುಗಟ್ಟಿ ನಿಂತಿದ್ದರು. ಈಗ ಅವರಿಗೆ ಆ ಅಹಿಂಸೆಯ ಬಗ್ಗೆ ನೆನಪು ಬಂದಿಲ್ಲವೇ?

ಕಸಬ್‌ನಂಥಾ ಉಗ್ರನೊಬ್ಬ ಮುಂಬೈ ಮೇಲೆ ದಾಳಿ ಮಾಡಿದಾಗ ಜೈನರು ಅವನ ಗುಂಡಿಗೆ ಬಲಿಯಾಗುತ್ತಿದ್ದರೆ? ಅಥವಾ ಅವನನ್ನು ರಕ್ಷಿಸಲು ನೋಡುತ್ತಿದ್ದರೇ? ಎಂದು ಶಿವಸೇನೆ ಪ್ರಶ್ನಿಸಿದೆ.

ಹಿಂಸೆ ಎಂಬುದು ಪ್ರಾಣಿಗಳನ್ನು ಕೊಲ್ಲುವುಕ್ಕೆ ಮಾತ್ರ ಸಂಬಂಧಿಸಿದ್ದಲ್ಲ. ಮುಂಬೈ ನಗರದಲ್ಲಿ ಬಿಲ್ಡರ್‌ಗಳಲ್ಲಿ ಹೆಚ್ಚಿನವರು ಜೈನರೇ. ಫ್ಲಾಟ್ ಖರೀದಿಸುವವರಿಂದ ಇವರು ಕಪ್ಪು ಹಣವನ್ನು ಸ್ವೀಕರಿಸುತ್ತಿಲ್ಲವೆ?. ಕಪ್ಪು ಹಣವನ್ನು ಸ್ವೀಕರಿಸುವುದು ಕೂಡಾ ಪಾಪ ಮತ್ತು ಹಿಂಸೆಯ ಇನ್ನೊಂದು ರೂಪ.  ಪರ್ಯೂಶನ್ ಸಮಯದಲ್ಲಿ ಇವರ್ಯಾರು ಕಪ್ಪು ಹಣ ಸ್ವೀಕರಿಸುವುದನ್ನು ನಿಲ್ಲಿಸಿ ಎಂದು ಹೇಳುವುದಿಲ್ಲ ಯಾಕೆ? ಎಂದು ಶಿವಸೇನೆ ಜೈನರಲ್ಲಿ ಪ್ರಶ್ನಿಸಿದೆ.



Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com