ಚಂಡೀಗಢ ಏರ್‌ಪೋರ್ಟ್‌ನಲ್ಲಿ ಟರ್ಮಿನಲ್ ಉದ್ಘಾಟಿಸಿದ ಪ್ರಧಾನಿ ಮೋದಿ

ಮೊಹಾಲಿಯಲ್ಲಿನ ಚಂಡೀಗಢ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಟರ್ಮಿನಲ್ ನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶುಕ್ರವಾರ ಉದ್ಘಾಟಿಸಿದ್ದಾರೆ...
ಪ್ರಧಾನಮಂತ್ರಿ ನರೇಂದ್ರ ಮೋದಿ (ಸಂಗ್ರಹ ಚಿತ್ರ)
ಪ್ರಧಾನಮಂತ್ರಿ ನರೇಂದ್ರ ಮೋದಿ (ಸಂಗ್ರಹ ಚಿತ್ರ)

ಚಂಡೀಗಢ: ಮೊಹಾಲಿಯಲ್ಲಿನ ಚಂಡೀಗಢ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಟರ್ಮಿನಲ್ ನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶುಕ್ರವಾರ ಉದ್ಘಾಟಿಸಿದ್ದಾರೆ.

ಅತ್ಯಾಧುನಿಕ ವಾಯು ಸಾರಿಗೆ ಸೌಕರ್ಯವನ್ನು ಉದ್ಘಾಟನೆ ಮಾಡಿ ನಂತರ ಮಾತನಾಡಿರುವ ಮೋದಿ ಅವರು, ಪಂಜಾಬ್, ಹರಿಯಾಣ ಮತ್ತು ಹಿಮಾಚಲ ಪ್ರದೇಶದ ಆರ್ಥಿಕ ಮತ್ತು ಕೈಗಾರಿಕಾ ಕ್ಷೇತ್ರಗಳ ಅಭಿವೃದ್ಧಿಯನ್ನು ಹೆಚ್ಚಿಸುತ್ತದೆ ಎಂದು ಹಾರೈಸಿದರು.

ಪ್ರಧಾನಮಂತ್ರಿ ಅವರು ಉದ್ಘಾಟಿಸಿರುವ ಈ ಅತ್ಯಾಧುನಿಕ ವಾಯು ಸಾರಿಗೆ ಸೌಕರ್ಯವು ದೇಶದ ಉತ್ತರ ಭಾಗದ ಪ್ರಾದೇಶಿಕ ಅಭಿವೃದ್ಧಿಗೆ ಪ್ರಬಲ ಮಾಧ್ಯಮವಾಗಿ ಕೆಲಸ ಮಾಡಲಿದ್ದು, ರು.939 ಕೋಟಿಗಳ ಮಹತ್ವಾಕಾಂಕ್ಷೀ ಯೋಜನೆಯಾಗಿದೆ. ಅಲ್ಲದೇ, ಈ ಯೋಜನೆಯ ನಿರ್ವಹಣೆ ಮತ್ತು ವ್ಯವಸ್ಥಾಪನೆಯನ್ನು ಚಂಡೀಗಢ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಂಸ್ಥೆಯು ಭಾರತೀಯ ವಾಯು ಸಾರಿಗೆ ಪ್ರಾಧಿಕಾರದ ಸಹಯೋಗದಲ್ಲಿ ಕೈಗೊಳ್ಳಲಿದೆ ಎಂದು ತಿಳಿದುಬಂದಿದೆ.

ಈ ಯೋಜನೆಗೆ ಭಾರತದ ವಿಮಾನ ನಿಲ್ದಾಣಗಳ ಪ್ರಾಧಿಕಾರವು ಶೇ.51ರಷ್ಟು ಹೂಡಿಕೆ ಮಾಡಿದ್ದು, ಪಂಜಾಬ್ ಮತ್ತು ಹರಿಯಾಣಗಳು ತಲಾ ಶೇ.24.5ರಷ್ಟು ಹಣವನ್ನು ಹೂಡಿಕೆ ಮಾಡಿವೆ.

ನೂತನ ಟರ್ಮಿನಲ್‌ನ ಉದ್ಘಾಟನಾ ಸಮಾರಂಭದಲ್ಲಿ ಪಂಜಾಬ್ ಮುಖ್ಯಂತ್ರಿ ಪ್ರಕಾಶ್ ಸಿಂಗ್ ಬಾದಲ್, ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಉಪಸ್ಥರಿದ್ದರು.

ಮೋದಿ ಭೇಟಿ ಹಿನ್ನೆಲೆಯಲ್ಲಿ ಚಂಡೀಗಡದಾದ್ಯಂತ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು, ಈಗಾಗಲೇ ಸ್ಥಳೀಯ ಪರೀಕ್ಷೆಗಳನ್ನು ಮುಂದೂಡಿರುವ ಅಲ್ಲಿನ ಸರ್ಕಾರ ಶಾಲಾ, ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದೆ. ಮೋದಿ ಅವರ ಭಾಷಣ ಕೇಳಲು ಸ್ಥಳದಲ್ಲಿ ಸಾಕಷ್ಟು ಜನರು ಸೇರಿದ್ದು, ಚಂಡೀಗಢದಾದ್ಯಂತ ಭಾರೀ ವಾಹನ ದಟ್ಟಣೆ ಸಮಸ್ಯೆ ಎದುರಾಗಿದೆ ಎಂದು ಹೇಳಲಾಗುತ್ತಿದೆ.

ಮೋದಿ ಚಂಡೀಗಢ ಭೇಟಿ ಹಿನ್ನೆಲೆಯಲ್ಲಿ ಈಗಾಗಲೇ ಹಲವು ವಿರೋಧ ವ್ಯಕ್ತಪಡಿಸುತ್ತಿರುವ ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರು ರಸ್ತೆಗಳಲ್ಲಿ ಪ್ರತಿಭಟನೆ ಯೋಜನೆ ರೂಪಿಸಿವೆ ಎಂದು ಹೇಳಾಗುತ್ತಿದ್ದು, ಭದ್ರತಾ ಕಾರ್ಯ ಕೈಗೊಂಡಿರುವ ಅಧಿಕಾರಿಗಳು ಸ್ಥಳದಲ್ಲಿ ಸೆಕ್ಷನ್ 144 ಜಾರಿ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೇ, ಮುಂಜಾಗ್ರತಾ ಕ್ರಮವಾಗಿ ಕೆಲವು ಸಂಘಟನೆಗಳಿಗೆ ನಿಷೇಧ ಹೇರಿದ್ದು, ಕಾನೂನು, ಸುವ್ಯವಸ್ಥೆಯನ್ನು ಕಾಪಾಡುವಂತೆ ಕರೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com