ಮುಂಬೈ: ಸತ್ಯಂ ಕಂಪ್ಯೂಟರ್ಸ್ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಕಂಪನಿ ಮುಖ್ಯಸ್ಥರಾಗಿದ್ದ ರಾಮಲಿಂಗ ರಾಜು ಮತ್ತು ಅವರ ಕುಟುಂಬ ಸದಸ್ಯರು ಸೇರಿದಂತೆ ಹತ್ತು ಕಂಪನಿಗಳು ಅಕ್ರಮವಾಗಿ ಗಳಿಸಿರುವ ರು. 1800 ಕೋಟಿ ಹಿಂತಿರುಗಿಸುವಂತೆ ಭಾರತೀಯ ಷೇರು ಮಾರುಕಟ್ಟೆ ನಿಯಂತ್ರಣ ಮಂಡಳಿ(ಸೆಬಿ) ಗುರುವಾರ ಆದೇಶಿಸಿದೆ.
ಇದರ ಜೊತೆಗೆ ಅಕ್ರಮವಾಗಿ ಗಳಿಸಿರುವ ಹಣಕ್ಕೆ 2009ರ ಜನವರಿಯಿಂದ ಇಲ್ಲಿವರೆಗೆ ಆಗುವ ಸುಮಾರು ರು. 1500 ಕೋಟಿಯಷ್ಟು ಬಡ್ಡಿಯನ್ನು ದಂಡ ರೂಪದಲ್ಲಿ ಪಾವತಿಸಬೇಕೆಂತಲೂ ಹೇಳಿದೆ.
ಅಕ್ರಮ ವಹಿವಾಟಿಗೆ ಸಂಬಂಧಿಸಿದಂತೆ ಕಳೆದ ವರ್ಷದ ಜುಲೈನಲ್ಲಿ ಸೆಬಿ ನೀಡಿದ್ದ ಆದೇಶದ ಮುಂದುವರೆದ ಭಾಗ ಇದಾಗಿದೆ. ಆಗ ರಾಮಲಿಂಗರಾಜು ಮತ್ತು ಇತರ ನಾಲ್ವರು 14 ವರ್ಷ ಷೇರುಪೇಟೆಯಲ್ಲಿ ವಹಿವಾಟು ನಡೆಸಿದಂತೆ ನಿಷೇಧದೊಂದಿಗೆ ರು. 1.849 ಕೋಟಿ ಬಡ್ಡಿ ರೂಪದ ದಂಡ ವಿಧಿಸಿತ್ತು.
ಗುರುವಾರದ ಆದೇಶದಲ್ಲಿ ಪ್ರತ್ಯೇಕವಾಗಿ ದಂಡ ನಿಗದಿಪಡಿಸಿದೆ. ರಾಜು ಕುಟುಂಬದ ನಿಯಂತ್ರಣದಲ್ಲಿರುವ ಎಸ್ಆರ್ಎಸ್ಆರ್ ಹೋಲ್ಡಿಂಗ್ಸ್, ಕುಟುಂಬ ಸದಸ್ಯರು, ಕಂಪನಿಯ ಮಾಜಿ ಅಧಿಕಾರಿಗಳ ವಿರುದ್ಧ ಆದೇಶ ನೀಡಿದೆ.