ಮೆಕ್ಕಾ ದುರಂತ: ಸಾವಿನ ಸಂಖ್ಯೆ 107ಕ್ಕೆ ಏರಿಕೆ
ರಿಯಾಧ್ (ಸೌದಿ ಅರೇಬಿಯಾ): ಹಜ್ ಯಾತ್ರಿಕರ ಪವಿತ್ರ ಸ್ಥಳ ಮೆಕ್ಕಾದ ಮುಖ್ಯ ಮಸೀದಿ 'ಮಸ್ಜಿದ್ ಅಲ್ ಹರಾಮ್'ನಲ್ಲಿ ಸಂಭವಿಸಿದ ದುರಂತಕ್ಕೆ ಸಂಬಂಧಿಸಿದಂತೆ ಸಾವಿನ ಸಂಖ್ಯೆ 107ಕ್ಕೆ ಏರಿದ್ದು, ಮೃತ ಪಟ್ಟವರಲ್ಲಿ ಇಬ್ಬರು ಭಾರತೀಯರು ಸೇರಿದ್ದಾರೆ ಎಂದು ಶನಿವಾರ ತಿಳಿದುಬಂದಿದೆ.
ಮೆಕ್ಕಾದಲ್ಲಿ ಸಂಭವಿಸಿದ ದುರ್ಘಟನೆಯಲ್ಲಿ 238ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ.
ವರ್ಷಗಳು ಕಳೆದಂತೆ ಹಜ್ ಗೆ ಆಗಮಿಸುವ ಜನಸಂಖ್ಯೆ ಹೆಚ್ಚುತ್ತಿರುವುದರಿಂದ ಸೌದಿ ಅಧಿಕಾರಿಗಳು ಮಸೀದಿಯ ಹೊರ ಆವರಣ 4ಲಕ್ಷ ಚದರ ಮೀ. ಪ್ರದೇಶದಲ್ಲಿ ವಿಸ್ತರಣೆ ಮಾಡುವ ಸಲುವಾಗಿ ಮಸೀದಿ ಸುತ್ತ ಹಲವಾರು ಕ್ರೇನ್ ಗಳನ್ನು ಅಳವಡಿಸಿ ಮಸೀದಿಯಲ್ಲಿ ನಿರ್ಮಾಣ ಕಾಮಗಾರಿಯನ್ನು ಭರದಿಂದ ನಡೆಸುತ್ತಿದ್ದರು. ಈ ವೇಳೆ ಕ್ರೇನ್ ವೊಂದು ಕುಸಿದು ಮಸೀದಿಯ ಕೆಳ ಅಂತಸ್ತಿಗೆ ಬಿದ್ದಿದೆ. ಭಾರಿ ಗಾಳಿ, ಮಳೆಯೇ ಈ ದುರ್ಘಟನೆಗೆ ಕಾರಣ ಎಂದು ಅಲ್ಲಿನ ಪೊಲೀಸ್ ಇಲಾಖೆ ತನ್ನ ಟ್ವಿಟರ್ ಅಕೌಂಟ್ ನಲ್ಲಿ ಹೇಳಿಕೊಂಡಿದೆ.
ಮಸೀದಿಯಲ್ಲಿ ಸಂಭವಿಸಿದ ದುರ್ಘಟನೆಯ ರಕ್ತಸಿಕ್ತ ಮೃತ ದೇಹಗಳು ಚೆಲಾಪಿಲ್ಲಿಯಾಗಿ ಬಿದ್ದಿರುವ ಚಿತ್ರಗಳು ಇದೀಗ ಸಾಮಾಜಿಕ ತಾಣಗಳಾದ್ಯಂತ ಹರಿದಾಡುತ್ತಿವೆ.
ಘಟನೆ ನಾನು ಸ್ಥಳದಲ್ಲೇ ಇದ್ದೇ. ಸ್ಥಳದಲ್ಲಿ ಭಾರಿ ಮಳೆ ಹಾಗೂ ಗಾಳಿ ಇತ್ತು. ಈ ವೇಳೆ ಇದ್ದಕ್ಕಿದ್ದಂತೆ ಕ್ರೇನ್ ವೊಂದಕ್ಕೆ ಸಿಡಿಲು ಬಡಿದಿತು. ಇದರಿಂದಾಗಿ ಕ್ರೇನ್ ಕೆಳಗೆ ಕುಸಿದು ಬಿತ್ತು ಎಂದು ಪ್ರತ್ಯಕ್ಷದರ್ಶಿ ಅಬ್ದೆಲ್ ಅಜಿಜ್ ನಕೂರ್ ಎಂಬುವವರು ಹೇಳಿದ್ದಾರೆ.
ಘಟನೆ ಕುರಿತಂತೆ ಈಗಾಗಲೇ ಪ್ರತಿಕ್ರಿಯೆ ನೀಡಿರುವ ಸೌದಿ ವಿದೇಶಾಂಗ ಸಚಿವ ಪ್ರಿನ್ಸ್ ಸೌದ್ ಅಲ್ ಫೈಸಲ್ ಅವರು, ಘಟನೆ ಕುರಿತಂತೆ ಅಧಿಕಾರಿಗಳಿಗಳೊಂದಿಗೆ ಸ್ಪಷ್ಟನೆ ನೀಡುವಂತೆ ಸೂಚನೆ ನೀಡಿದ್ದು, ತನಿಖೆ ಆದೇಶಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಘಟನೆಗೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣವಾಗಿದ್ದು. ಪರಂಪರೆ ಸಂಸ್ಕೃತಿ ಬಗ್ಗೆ ಅಧಿಕಾರಿಗಳಿಗೆ ನಿರ್ಲಕ್ಷ್ಯ. ಯಾತ್ರಾರ್ಥಿಗಳ ಆರೋಗ್ಯ ಹಾಗೂ ಸುರಕ್ಷೆಯ ಬಗ್ಗೆ ಅವರು ಚಿಂತಿಸುವುದಿಲ್ಲ ಎಂದು ಮೆಕ್ಕಾಗೆ ಸೇರಿದ ಇಸ್ಲಾಮಿಕ್ ಹೆರಿಟೇಜ್ ರಿಸರ್ಜ್ ಫೌಂಡೇಶನ್ ನ ಸಹ ಸಂಸ್ಥಾಪಕ ಇರ್ಫಾನ್ ಅಲ್ ಅಲಾವಿ ಆರೋಪ ವ್ಯಕ್ತಪಡಿಸಿದ್ದಾರೆ.
ಸಹಾಯವಾಣಿ ಸಂಖ್ಯೆಗಳು ಈ ಕೆಳಗಿನಂತಿವೆ
- 00966125458000/00966125496000
ಸೌದಿಯೊಳಗಿನ ಯಾತ್ರಿಕರಿಗಾಗಿರುವ ಉಚಿತ ಸಹಾಯವಾಣಿ ಸಂಖ್ಯೆ
- 8002477786
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ