
ಲಕ್ನೋ: ಉತ್ತರ ಪ್ರದೇಶದ ಐಜಿ ಶ್ರೇಣಿಯ ಪೊಲೀಸ್ ಅಧಿಕಾರಿ ಅಮಿತಾಬ್ ಠಾಕೂರ್ ಗೆ ಬೆದರಿಕೆ ಪ್ರಕರಣ ಸಂಬಂಧ ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ಯಾದವ್ ವಿರುದ್ಧ ಎಫ್ ಐ ಆರ್ ದಾಖಲಿಸುವಂತೆ ಸ್ಥಳೀಯ ನ್ಯಾಯಾಲಯ ಪೊಲೀಸರಿಗೆ ಆದೇಶಿಸಿದೆ.
ತಮಗೆ ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್ ಅವರಿಂದ ಬೆದರಿಕೆ ಇದೆ ಎಂದು ಅಮಿತಾಬ್ ಠಾಕೂರ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ಸೋಮ್ ಪ್ರಭಾ ಐಪಿಸಿ ಸೆಕ್ಷನ್ 156(3) ರ ಅಡಿಯಲ್ಲಿ ಮುಲಾಯಂ ವಿರುದ್ಧ ಎಫ್ ಐ ಆರ್ ದಾಖಲಿಸಲು ಆದೇಶಿಸಿದ್ದಾರೆ.
ಮುಲಾಯಂ ಸಿಂಗ್ ಯಾದವ್ ವಿರುದ್ಧ ಎಫ್ ಐಆರ್ ದಾಖಲಿಸಲು ಉತ್ತರ ಪ್ರದೇಶ ಪೊಲೀಸರು ನಿರಾಕರಿಸಿದ ಹಿನ್ನೆಲೆಯಲ್ಲಿ ಅಮಿತಾಬ್ ಠಾಕೂರ್ ನ್ಯಾಯಾಲಯದ ಮೊರೆ ಹೋಗಿದ್ದರು.
ಮುಲಾಯಂ ಸಿಂಗ್ ವಿರುದ್ಧ ಎಫ್ ಐಆರ್ ದಾಖಲಿಸಿ ತನಿಖೆ ನಡೆಸಲು ಅಗತ್ಯವಾದ ಸಾಕ್ಷಿಗಳು ಇಲ್ಲ ಎಂಬ ಕಾರಣ ನೀಡಿ ಉತ್ತರ ಪ್ರದೇಶದ ಹಜ್ರತ್ ಗಂಜ್ ಪೊಲೀಸ್ ಇನ್ಸ್ ಪೆಕ್ಟರ್ ಅಮಿತಾಬ್ ಠಾಕೂರ್ ಗೆ ಜುಲೈ 17 ರಂದು ಪತ್ರ ಬರೆದಿದ್ದರು. ಈ ಹಿನ್ನೆಲೆಯಲ್ಲಿ ಜುಲೈ 22ರಂದು ಠಾಕೂರ್ ಕೋರ್ಟ್ ಮೊರೆ ಹೋಗಿದ್ದರು.
Advertisement