
ನವದೆಹಲಿ: ಬಿಹಾರ ವಿಧಾನಸಭೆ ಚುನಾವಣೆ ಮುಗಿಯುವವರೆಗೆ ಪ್ರಧಾನಿ ನರೇಂದ್ರ ಮೋದಿ ಅವರ ರೇಡಿಯೋ ಭಾಷಣ 'ಮನ್ ಕಿ ಬಾತ್'ಗೆ ತಡೆ ನೀಡಬೇಕು ಎಂಬ ಕಾಂಗ್ರೆಸ್ ಮನವಿಯನ್ನು ಚುನಾವಣಾ ಆಯೋಗ ಬುಧವಾರ ತಿರಸ್ಕರಿಸಿದೆ.
ಪ್ರಧಾನಿ ಮೋದಿ ಅವರು ತಮ್ಮ 'ಮನ್ ಕಿ ಬಾತ್' ಕಾರ್ಯಕ್ರಮದ ಮೂಲಕ ಸರ್ಕಾರದ ಸಾಧನೆಗಳನ್ನು ಹಾಗೂ ಭರವಸೆಗಳನ್ನು ನೀಡುವ ಸಾಧ್ಯತೆ ಇದ್ದು, ಇದು ಮತದಾರರ ಮೇಲೆ ಪ್ರಭಾವ ಬೀರಲಿದೆ. ಹೀಗಾಗಿ ಮನ್ ಕಿ ಬಾತ್ ಕಾರ್ಯಕ್ರಮಕ್ಕೆ ತಡೆ ನೀಡಬೇಕು ಎಂದು ಕಾಂಗ್ರೆಸ್ ಆಯೋಗಕ್ಕೆ ಮನವಿ ಸಲ್ಲಿಸಲು ಮುಂದಾಗಿತ್ತು.
ಈ ಬಗ್ಗೆ ಸುದ್ದಿ ಸಂಸ್ಥೆಗೆ ಪ್ರತಿಕ್ರಿಯೆ ನೀಡಿರುವ ಚುನಾವಣಾ ಆಯೋಗದ ಹಿರಿಯ ಅಧಿಕಾರಿಯೊಬ್ಬರು, ಮನ್ ಕಿ ಬಾತ್ ನಲ್ಲಿ ಪ್ರಧಾನಿ ಅವರು ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿ, ಯಾವುದೇ ಆಮಿಷಗಳನ್ನು ಒಡ್ಡಿದರೆ ಸ್ವಯಂ ಪ್ರೇರಿತವಾಗಿ ತಡೆ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಮಹಾರಾಷ್ಟ್ರ ಹಾಗೂ ದೆಹಲಿ ವಿಧಾನಸಭೆ ಚುನಾವಣೆಯಲ್ಲೂ 'ಮನ್ ಕಿ ಬಾತ್'ಗೆ ತಡೆ ನೀಡಬೇಕು ಎಂದು ಆಯೋಗಕ್ಕೆ ಮನವಿ ಮಾಡಲಾಗಿತ್ತು. ಇದನ್ನು ಪರಿಶೀಲಿಸಿದ್ದ ಆಯೋಗ, ರಾಜ್ಯ ಸರ್ಕಾರದ ರೇಡಿಯೋ ಮೂಲಕ ಅವರ ಭಾಷಣ ಮಾಡುವುದಿಲ್ಲ ಮತ್ತು ಅವರು ರಾಷ್ಟ್ರವ್ಯಾಪಿ ಕೇಳುಗರನ್ನು ಉದ್ದೇಶಿಸಿ ಮಾತನಾಡುತ್ತಾರೆ ಎಂದು ಹೇಳಿ, ತಡೆ ನೀಡಲು ನಿರಾಕರಿಸಿತ್ತು.
ಮುಂದಿನ ತಿಂಗಳು ಐದು ಹಂತಗಳಲ್ಲಿ ಬಿಹಾರ ವಿಧಾನಸಭೆ ಚುನಾವಣೆ ನಡೆಯುತ್ತಿದ್ದು, ಅಕ್ಟೋಬರ್ 12ರಂದು ಮೊದಲ ಹಂತ ಹಾಗೂ ನವೆಂಬರ್ 5ರಂದು ಅಂತಿಮ ಹಂತದ ಮತದಾನ ನಡೆಯಲಿದೆ. ಸೆಪ್ಟೆಂಬರ್ 8ರಂದು ಫಲಿತಾಂಶ ಪ್ರಕಟವಾಗಲಿದೆ.
Advertisement