
ಶ್ರೀನಗರ: ಜಮ್ಮು-ಕಾಶ್ಮೀರದ ಬರಮುಲ್ಲಾ ಜಿಲ್ಲೆಯ ಪಟ್ಟಣ್ ಎಂಬಲ್ಲಿ ಶಂಕಿತ ಮೂವರು ಯುವಕರ ಹತ್ಯೆ ಖಂಡಿಸಿ ಕಾಶ್ಮೀರ ಕಣಿವೆಯಲ್ಲಿ ಬುಧವಾರ ಸಂಪೂರ್ಣ ಬಂದ್ ಆಚರಿಸಲಾಗುತ್ತಿದೆ.
ಪ್ರತ್ಯೇಕತಾವಾದಿ ಹುರ್ರಿಯತ್ ಕಾನ್ಫರೆನ್ಸ್ ಗುಂಪಿನ ನಾಯಕ ಸೈಯದ್ ಗಿಲಾನಿ ಅವರು ನೀಡಿರುವ ಬಂದ್ ಕರೆಗೆ ಎಲ್ಲಾ ಪ್ರತ್ಯೇಕತಾವಾದಿ ಮುಖಂಡರು ಬೆಂಬಲ ಸೂಚಿಸಿದ್ದಾರೆ.
ಎಲ್ಲಾ ಅಂಗಡಿ-ಮುಂಗಟ್ಟುಗಳನ್ನು, ಶಾಲಾ-ಕಾಲೇಜು, ಸರ್ಕಾರಿ ಕಚೇರಿಗಳನ್ನು ಮುಚ್ಚಲಾಗಿದ್ದು ಬಂದ್ ನಿಂದಾಗಿ ಸಾರ್ವಜನಿಕ ಸಂಚಾರಕ್ಕೆ ವ್ಯತ್ಯಯವುಂಟಾಗಿದೆ. ರಾಜ್ಯದ ಪ್ರಮುಖ ಮತ್ತು ಸೂಕ್ಷ್ಮ ಪ್ರದೇಶಗಳಲ್ಲಿ ಕಾನೂನು, ಸುವ್ಯವಸ್ಥೆಯನ್ನು ಕಾಪಾಡಲು ಮತ್ತು ಯಾವುದೇ ಅಹಿತಕರ ಘಟನೆಯನ್ನು ತಪ್ಪಿಸಲು ಪೊಲೀಸ್ ಮತ್ತು ಕೇಂದ್ರ ಮೀಸಲು ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ.
ಬರಮುಲ್ಲಾ ಜಿಲ್ಲೆಯ ಪಟ್ಟಣ್ ನಲ್ಲಿನ ಶ್ಚೂಚ್ ಗ್ರಾಮದ ಹಣ್ಣಿನ ತೋಟವೊಂದರಲ್ಲಿ ಇಂದು ಮೂವರು ಯುವಕರ ಶವ ಪತ್ತೆಯಾಗಿದ್ದು ಅವರನ್ನು ಅಮೀರ್ ರೆಶಿ, ಆಶಿಕ್ ಅಹ್ಮದ್ ಮತ್ತು ನವೀದ್ ಖಾನ್ ಎಂದು ಗುರುತಿಸಲಾಗಿದೆ. ಇವರ ಹತ್ಯೆಯನ್ನು ಖಂಡಿಸಿ ನಿನ್ನೆ ಪ್ರತಿಭಟನೆ ನಡೆಸುತ್ತಿದ್ದ ಜಮ್ಮು ಮತ್ತು ಕಾಶ್ಮೀರ ಲಿಬರೇಶನ್ ಫ್ರಂಟ್ ನ ಮುಖ್ಯಸ್ಥ ಯಾಸಿನ್ ಮಲಿಕ್ ನನ್ನು ಪೊಲೀಸರು ನಿನ್ನೆ ಬಂಧಿಸಿದ್ದರು.
Advertisement