ಬಂಡಾಯಕ್ಕೆ ಮುಂದಾಗಿದ್ದ ನೇತಾಜಿ ಹಿರಿಯ ಸೋದರ

ನೇತಾಜಿ ಸುಭಾಶ್‍ಚಂದ್ರ ಬೋಸ್‍ಗೆ ಸಂಬಂಧಿಸಿದ ರಹಸ್ಯ ಕಡತಗಳು ಬಿಡುಗಡೆಯಾಗುತ್ತಿದ್ದಂತೆ, ಅವರ ಕುರಿತ ಅನೇಕ ವಿಚಾರಗಳು ಒಂದೊಂದಾಗಿ ಬೆಳಕಿಗೆ ಬರುತ್ತಿವೆ...
ಸುಭಾಶ್ ಚಂದ್ರ ಬೋಸ್
ಸುಭಾಶ್ ಚಂದ್ರ ಬೋಸ್
ನವದೆಹಲಿ: ನೇತಾಜಿ ಸುಭಾಶ್‍ಚಂದ್ರ ಬೋಸ್‍ಗೆ ಸಂಬಂಧಿಸಿದ ರಹಸ್ಯ ಕಡತಗಳು ಬಿಡುಗಡೆಯಾಗುತ್ತಿದ್ದಂತೆ ಅವರ ಕುರಿತ ಅನೇಕ ವಿಚಾರಗಳು ಒಂದೊಂದಾಗಿ ಬೆಳಕಿಗೆ ಬರುತ್ತಿವೆ.
ನೇತಾಜಿಯ ಹಿರಿಯ ಸಹೋದರ ಶರತ್‍ಚಂದ್ರ ಬೋಸ್ ಅವರು 1941ರಲ್ಲಿ ಬ್ರಿಟಿಷರ ವಿರುದ್ಧ ಶಸ್ತ್ರಸಜ್ಜಿತ ಬಂಡಾಯವೇಳಲು ಯೋಜನೆ ರೂಪಿಸಿದ್ದರು. ಜಪಾನ್ ನೆರವು ನೀಡಿದರೆ 50 ಸಾವಿರ ಮಂದಿಯ ಸೇನೆಯನ್ನು ಕಟ್ಟಿ ಬ್ರಿಟಿಷರ ವಿರುದ್ಧ ಹೋರಾಟ ರೂಪಿಸಲು ಅವರು ಮುಂದಾಗಿದ್ದರು ಎಂದು ಕಡತವೊಂದನ್ನು ಉಲ್ಲೇಖಿಸಿ ಖಾಸಗಿ ಪತ್ರಿಕೆಯೊಂದು ವರದಿ ಮಾಡಿದೆ.
ಕೋಲ್ಕತಾದಲ್ಲಿದ್ದ ಜಪಾನೀಸ್ ಕಾನ್ಸುಲೇಟ್‍ನ ಚಾನ್ಸೆಲರ್ ಓಹ್ತಾಗೆ ಪತ್ರ ಬರೆದಿದ್ದ ಶರತ್‍ಚಂದ್ರ ಬೋಸ್, ಜಪಾನೀಯರಿಗೆ ರಹಸ್ಯ ಮಾಹಿತಿಗಳನ್ನು ಒದಗಿಸುವ ಸಂಘವೊಂದನ್ನು ಕಟ್ಟುತ್ತೇನೆ. ನಮ್ಮಲ್ಲಿ ಈಗ 10 ಸಾವಿರ ಮಂದಿಯಿದ್ದು, ಸಶಸ್ತ್ರ ಹೋರಾಟಕ್ಕೆ ಸನ್ನದ್ಧರಾಗಿದ್ದಾರೆ. ಹಣಕಾಸು ನೆರವು ಮತ್ತು ಶಸ್ತ್ರಾಸ್ರಗಳು ಸಿಕ್ಕರೆ ಕೆಲವೇ ತಿಂಗಳಲ್ಲಿ ಇವರ ಸಂಖ್ಯೆಯನ್ನು 50 ಸಾವಿರಕ್ಕೇರಿಸುತ್ತೇನೆ ಎಂದಿದ್ದರು. ಜತೆಗೆ, ಈ ಬಗ್ಗೆ ನೀವು `ಎಸ್'ಗೆ(ಸುಭಾಶ್‍ಚಂದ್ರ ಬೋಸ್ ಇರಬಹುದು ಎಂದು ನಂಬಲಾಗಿದೆ) ಒಂದು ಸಂದೇಶ ಕಳುಹಿಸಿ. ಇದು ಬಹಳ ಅರ್ಜೆಂಟ್ ಎಂದೂ ಅವರು ಪತ್ರದಲ್ಲಿ ತಿಳಿಸಿದ್ದರು ಎನ್ನಲಾಗಿದೆ. 
ಹಾಡು ನಿಷೇಧಕ್ಕೆ ಮುಂದಾಗಿದ್ದರು: ಇದೇ ವೇಳೆ, ನೇತಾಜಿ ಅವರ ಇಂಡಿಯನ್ ನ್ಯಾಷನಲ್ ಆರ್ಮಿ(ಐಎನ್‍ಎ)ಯ ಹಾಡು `ಕದಂ ಕದಂ ಬಡಾಯೇ ಜಾ'ವನ್ನು ನಿಷೇಧಿಸಲು ಬ್ರಿಟಿಷರು ನಿರ್ಧರಿಸಿದ್ದರು ಎಂಬ ಅಂಶವೂ ಕಡತಗಳಿಂದ ಬಯಲಾಗಿದೆ. ಇದನ್ನು ರಾಷ್ಟ್ರದ್ರೋಹಿ ಹಾಡು ಎಂದು ಹೇಳಿದ್ದ ಬ್ರಿಟಿಷರು, ಅದರ ರೆಕಾರ್ಡಿಂಗ್ ಸ್ಥಗಿತಗೊಳಿಸುವಂತೆ ಬ್ರಿಟಿಷ್ ಗ್ರಾಮೋ- ಫೋನ್ ಕಂಪನಿಗೆ ಸೂಚಿಸಿತ್ತು ಎನ್ನಲಾಗಿದೆ. ಈ ನಡುವೆ, ನೇತಾಜಿ ಹಾಗೂ ಇಂಡಿಯನ್ ನ್ಯಾಷನಲ್ ಆರ್ಮಿಗೆ ಸಂಬಂಧಿಸಿದ 76 ಕಡತಗಳು ಇನ್ನೂ ದೆಹಲಿಯ ಗುಪ್ತಚರ ದಳದ ಪ್ರಧಾನ ಕಚೇರಿಯಲ್ಲಿ ರಹಸ್ಯವಾಗಿಡಲಾಗಿದೆ ಎಂದು 'ದ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್' ವರದಿ ಮಾಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com