9 ದಿನಗಳಿಂದ ಸುರಂಗದಲ್ಲಿ ಸಿಲುಕಿದ್ದ ಇಬ್ಬರು ಕಾರ್ಮಿಕರ ರಕ್ಷಣೆ

ಹಿಮಾಚಲ ಪ್ರದೇಶದ ಬಿಲಾಸ್ ಪುರದಲ್ಲಿ ಕಳೆದ 9 ದಿನಗಳಿಂದ ಸುರಂಗದಲ್ಲಿ ಸಿಲುಕಿದ್ದ ಇಬ್ಬರು ಕಾರ್ಮಿಕರನ್ನು ಸೋಮವಾರ ರಕ್ಷಿಸಲಾಗಿದೆ.
ಸುರಂಗ ಮಾರ್ಗ, ಕಾರ್ಮಿಕರು(ಒಳ ಚಿತ್ರ)
ಸುರಂಗ ಮಾರ್ಗ, ಕಾರ್ಮಿಕರು(ಒಳ ಚಿತ್ರ)

ಬಿಲಾಸ್ ಪುರ್: ಹಿಮಾಚಲ ಪ್ರದೇಶದ ಬಿಲಾಸ್ ಪುರದಲ್ಲಿ ಕಳೆದ 9 ದಿನಗಳಿಂದ ಸುರಂಗದಲ್ಲಿ ಸಿಲುಕಿದ್ದ ಇಬ್ಬರು ಕಾರ್ಮಿಕರನ್ನು ಸೋಮವಾರ ರಕ್ಷಿಸಲಾಗಿದೆ.

ಸೆಪ್ಟೆಂಬರ್ 12ರಂದು ನಿರ್ಮಾಣ ಹಂತದಲ್ಲಿದ್ದ ಸುರಂಗಮಾರ್ಗ ಕುಸಿದ ಪರಿಣಾಮ ಮೂವರು ಕಾರ್ಮಿಕರು ಒಳಗಡೆಯೇ ಸಿಲುಕಿದ್ದರು. ನಿರಂತರ ಕಾರ್ಯಾಚರಣೆ ನಡೆಸಿದ ರಾಷ್ಟ್ರೀಯ ವಿಪತ್ತು ನಿರ್ವಾಹಣಾ ದಳ, 200 ಗಂಟೆಗಳ ಬಳಿಕ ಇಬ್ಬರು ಕಾರ್ಮಿಕರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದೆ.

ರಕ್ಷಣಾ ಕಾರ್ಯಾಚರಣೆ ವೇಳೆ ರವಾನಿಸಿದ್ದ ಕ್ಯಾಮೆರಾದಲ್ಲಿ ಈ ಇಬ್ಬರ ದೃಶ್ಯ ಸಿಕ್ಕಿತ್ತು. ದೃಶ್ಯಗಳಲ್ಲಿ ಇಬ್ಬರು ಕಾರ್ಮಿಕರು ತಮ್ಮ ರಕ್ಷಣೆಗೆ ಬೇಡಿಕೊಳ್ಳುತ್ತಿರುವ ದೃಶ್ಯ ಮನಕಲಕುವಂತಿತ್ತು. ಇಬ್ಬರು ಕ್ಯಾಮೆರಾದ ಮುಂದೆ ಮಾತನಾಡಿದ್ದು, ಇನ್ನು ಏಳು ಎಂಟು ದಿನ ಬದುಕಿ ಉಳಿಯುವ ಶಕ್ತಿ ಹೊಂದಿದ್ದೇವೆ ಎಂದು ಹೇಳಿದ್ದರು. ಹೀಗಾಗಿ ರಕ್ಷಣಾ ಕಾರ್ಯಾಚರಣೆ ಮುಂದುವರೆಸಲಾಗಿತ್ತು. ಆದರೆ, ಸುರಂಗದಲ್ಲಿ ಸಿಲುಕಿಕೊಂಡಿರುವ ಮತ್ತೊಬ್ಬ ಕಾರ್ಮಿಕನ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ.

ಇಬ್ಬರು ಕಾರ್ಮಿಕರನ್ನು ರಕ್ಷಿಸಲಾಗಿದ್ದು, ಮೂರನೇ ಕಾರ್ಮಿಕ ಪತ್ಯೆಯಾಗುವವರೆಗೂ ಕಾರ್ಯಾಚರಣೆ ಮುಂದುವರೆಯಲಿದೆ ಎಂದು ಹಿಮಾಚಲ ಪ್ರದೇಶ ಮುಖ್ಯಮಂತ್ರಿ ವೀರಭದ್ರ ಸಿಂಗ್ ಅವರು ಹೇಳಿದ್ದಾರೆ.

ಬಿಲಾಸ್ ಪುರದಲ್ಲಿ ಸುಮಾರು 1,200 ಮೀಟರ್ ಉದ್ದದ ಸುರಂಗ ಮಾರ್ಗ ನಿರ್ಮಾಣ ಮಾಡುತ್ತಿದ್ದ ಸಂದರ್ಭದಲ್ಲಿ ಗುಡ್ಡ ಕುಸಿದ ಪರಿಣಾಮ ಮೂವರು ಕಾರ್ಮಿಕರು ಸುರಂಗದೊಳಗೆ ಸಿಲುಕಿದ್ದರು. 9 ದಿನಗಳಿಂದ ಸುರಂಗದೊಳಗೆ ಕಾರ್ಮಿಕರು ಜೀವನ್ಮರಣ ಹೋರಾಟ ನಡೆಸುತ್ತಿದ್ದರು. ಮತ್ತೊಂದೆಡೆ ಸುರಂಗದೊಳಗಿದ್ದ ಕಾರ್ಮಿಕರಿಗೆ ಆಕ್ಸಿಜನ್, ಗ್ಲುಗೋಸ್, ಅಗತ್ಯವಾದ ಆಹಾರಗಳನ್ನು ಕೊಡಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com