

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ವಿಶ್ವ ಸಂಸ್ಥೆಯಲ್ಲಿ ಸುಸ್ಥಿರ ಅಭಿವೃದ್ಧಿ ಬಗ್ಗೆ ಮಾತನಾಡಲಿರುವ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಸಂಪುಟದಲ್ಲಿ ಯುಎನ್ 2030 ಅಜೆಂಡಾ ಹಾಗೂ ಅದರಲ್ಲಿ ಭಾರತದ ಸ್ಥಾನದ ಬಗ್ಗೆ ಚರ್ಚೆ ನಡೆಡಿದೆ.
ವಿಶ್ವಸಂಸ್ಥೆ ಕಾರ್ಯದರ್ಶಿ ಬಾನ್ ಕಿ ಮೂನ್ ಅವರು ಸೆ.25 ರಂದು ಆಯೋಜಿಸಿರುವ ಸುಸ್ಥಿರ ಅಭಿವೃದ್ಧಿ ಬಗೆಗಿನ ಉನ್ನತ ಮಟ್ಟದ ಶೃಂಗಸಭೆಯಲ್ಲಿ 2015 ರ ನಂತರ ನಡೆಯಬೇಕಿರುವ ಕಾರ್ಯಸೂಚಿಗಳನ್ನು ಅಳವಡಿಸಿಕೊಳ್ಳಲಾಗುತ್ತದೆ ಈ ಹಿನ್ನೆಲೆಯಲ್ಲಿ 2030 ವರೆಗಿನ ಕಾರ್ಯಸೂಚಿ ಹಾಗೂ ಅದರಲ್ಲಿ ಭಾರತದ ಪಾತ್ರವನ್ನು ಕೇಂದ್ರ ಸಚಿವ ಸಂಪುಟ ಚರ್ಚಿಸಿದೆ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.
ಶೃಂಗಸಭೆಯಲ್ಲಿ ವಿಶ್ವ ನಾಯಕರು,2030 ವೇಳೆಗೆ ಬಡತನ ನಿರ್ಮೂಲನೆ, ಪರಿಸರ ಸಂರಕ್ಷಿಸುವುದು ಸೇರಿದಂತೆ 17 ಹೊಸ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಅಳವಡಿಸಿಕೊಳ್ಳಲಿದ್ದಾರೆ. ಈ ಶೃಂಗಸಭೆಯಲ್ಲಿ ವಿಶ್ವದ ಸುಮಾರು 150 ಕ್ಕೂ ಹೆಚ್ಚು ದೇಶಗಳ ನಾಯಕರು ಭಾಗಿಯಾಗಲಿದ್ದಾರೆ.
ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸಹ ಭಾಗವಹಿಸಲಿದ್ದಾರೆ ಎಂದು ವಿಶ್ವಸಂಸ್ಥೆಯಲ್ಲಿರುವ ಭಾರತದ ಪ್ರತಿನಿಧಿ ಅಶೋಕ್ ಮುಖರ್ಜಿ ತಿಳಿಸಿದ್ದರು. ಅಭಿವೃದ್ಧಿ ಕಾರ್ಯಸೂಚಿ ಬಗ್ಗೆ ಪ್ರಧಾನಿ ಅತಿ ಹೆಚ್ಚು ಗಮನ ಹರಿಸಿದ್ದು, 2030 ರ ಅಜೆಂಡಾ ಬಗ್ಗೆಯೇ ಮಾತನಾಡಲಿದ್ದಾರೆ ಎಂದು ಅಶೋಕ್ ಮುಖರ್ಜಿ ತಿಳಿಸಿದ್ದರು.