

ಮುಂಬಯಿ: 2006 ಮುಂಬೈ ರೈಲು ಸ್ಫೋಟ ಪ್ರಕರಣ ಸಂಬಂಧ ಇಂದು ಮೋಕಾ ನ್ಯಾಯಾಲಯ ಅಪರಾಧಿಗಳ ಶಿಕ್ಷೆ ಪ್ರಮಾಣವನ್ನು ಪ್ರಕಟಿಸಿದೆ. 8 ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಿರುವ ಕೋರ್ಟ್ ಅಪರಾಧಿಗಳನ್ನು ಸಾವಿನ ವ್ಯಾಪಾರಿಗಳು ಎಂದು ಜರಿದಿದೆ.
2006ರಲ್ಲಿ ಸಂಭವಿಸಿದ ಮುಂಬೈ ಉಪನಗರ ರೈಲು ಸ್ಫೋಟದಲ್ಲಿ 188 ಮಂದಿ ಈ ಘಟನೆಯಲ್ಲಿ ಸಾವನ್ನಪ್ಪಿದ್ದರು. ವಿಶೇಷ "ಮೋಕಾ' (ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ) ಕೋರ್ಟ್ ಇಂದು ತೀರ್ಪು ನೀಡಿದೆ.
ಮೋಕಾ ಕೋರ್ಟ್ ನ್ಯಾಯಾಧೀಶ ಯತಿನ್ ಡಿ. ಶಿಂಧೆ ಅವರು ಪ್ರಕರಣದ ವಿಚಾರಣೆಯನ್ನು ಕಳೆದ ವರ್ಷ ಆ.19ರಂದು ಅಂತ್ಯಗೊಳಿಸಿದ್ದರು. ಕಳೆದ 8 ವರ್ಷಗಳಿಂದ ಪ್ರಕರಣದ ವಿಚಾರಣೆ ನಡೆಸಲಾಗಿದ್ದು, ಪ್ರಾಸಿಕ್ಯೂಷನ್ ಪರ 192 ಸಾಕ್ಷಿಗಳ ಹೇಳಿಕೆಗಳನ್ನು ಪಡೆಯಲಾಗಿತ್ತು. ಸಾಕ್ಷಿಗಳ ಹೇಳಿಕೆಗಳನ್ನು 5500 ಪುಟಗಳಲ್ಲಿ ದಾಖಲಿಸಲಾಗಿತ್ತು. ಪ್ರಕರಣದಲ್ಲಿ 13 ಆರೋಪಿಗಳು ಬಂಧಿತರಾಗಿದ್ದು, ಅಜಂ ಚೀಮಾ ಸೇರಿ 14 ಮಂದಿ ಇನ್ನೂ ನಾಪತ್ತೆಯಾದ್ದಾರೆ.
2006 ಜು.11ರಂದು ಮುಂಬೈ ಉಪನಗರ ರೈಲಿನಲ್ಲಿ ಸರಣಿ ಸ್ಫೋಟ ಸಂಭವಿಸಿತ್ತು. ಖಾರ್‌ರೋಡ್-ಸಾಂತಾಕ್ರೂಜ್ ಮತ್ತು ಬೊರಿವಲಿ ಮಧ್ಯೆ ವಿವಿಧೆಡೆ 7 ಆರ್‌ಡಿಎಕ್ಸ್‌ಗಳು ಸ್ಫೋಟಿಸಿ 829 ಮಂದಿ ಗಾಯಗೊಂಡಿದ್ದರು.